ನಾವು ಮಾಡಿಯೇ ತೀರುತ್ತೇವೆ': 2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪ; ಪ್ರಧಾನಿ ಮೋದಿ!
ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, “ನಾವು ಇದನ್ನು ಮಾಡಿಯೇ ತೀರುತ್ತೇವೆ” (We Will Do It) ಎಂಬ ಘೋಷಣೆಯನ್ನು ಬುಧವಾರ...

ನವದೆಹಲಿ: 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಬುಧವಾರ “ನಾವು ಇದನ್ನು ಮಾಡಿಯೇ ತೀರುತ್ತೇವೆ” (We Will Do It) ಎಂಬ ಮಂತ್ರವನ್ನು ಪಠಿಸಿದರು. ದೂರದೃಷ್ಟಿಯುಳ್ಳ ಯೋಜನೆಗಳು ಹಾಗೂ ನಿರಂತರ ಶ್ರಮದಿಂದ ಈ ಗುರಿ ತಲುಪಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಮಾಜವನ್ನು ಮತಗಳ ಆಧಾರದ ಮೇಲೆ ವಿಭಜಿಸುವುದು ದೇಶದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟರು.
ರೈತರ ಜಮೀನಿನಲ್ಲಿ ನೀರಿನ ಕೊರತೆಯಾದಾಗ, ಆ ಸಮಸ್ಯೆ ಒಂದು ನಿರ್ದಿಷ್ಟ ಜಾತಿಗೆ ಮಾತ್ರ ಸೀಮಿತವಾಗುತ್ತದೆಯೇ? ವಿದ್ಯುತ್ ಇಲ್ಲದಿದ್ದಾಗ ಕತ್ತಲೆಯು ಒಂದು ಸಮುದಾಯಕ್ಕೆ ಮಾತ್ರವೇ ಬಾಧಿಸುತ್ತದೆಯೇ? ಇಲ್ಲ ಎಂದು ಉತ್ತರಿಸಿದ ಅವರು, ಸಮಸ್ಯೆ ಎಲ್ಲರಿಗೂ ಸಾಮಾನ್ಯವಾದಾಗ, ಪರಿಹಾರವೂ ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.
ಇಂದು ಜನರು ಕಾಣುತ್ತಿರುವ ವಿಕಸಿತ ಭಾರತದ ಕಲ್ಪನೆಯು ಖಂಡಿತವಾಗಿಯೂ ಸಾಕಾರಗೊಳ್ಳಲಿದೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
ಭಾರತವು ನಿಲ್ಲಲು ಯಾವ ಕಾರಣವೂ ಇಲ್ಲ. ನೂರು ವರ್ಷಗಳ ಹಿಂದೆ ನಮ್ಮ ಜನಸಂಖ್ಯೆ 40 ಕೋಟಿಗಿಂತ ಕಡಿಮೆ ಇತ್ತು, ಆದರೆ ಇಂದು ಅದು 140 ಕೋಟಿಗೂ ಹೆಚ್ಚಾಗಿದೆ. 140 ಕೋಟಿ ಭಾರತೀಯರು ಒಂದಾಗಿ 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲಿದ್ದಾರೆ. ನಾವು ಖಂಡಿತ ಮಾಡುತ್ತೇವೆ, ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂದು ಅವರು ನುಡಿದರು.
2047ರ ವೇಳೆಗೆ ವಿಕಸಿತ ಭಾರತ: ನಾವು ಇದನ್ನು ಮಾಡಿಯೇ ತೀರುತ್ತೇವೆ. ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಸ್ಥಾನ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಆತ್ಮನಿರ್ಭರ ಭಾರತ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಜಾಗತಿಕ ಉತ್ಪಾದನಾ ಕೇಂದ್ರ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಒಲಿಂಪಿಕ್ಸ್ ಆಯೋಜನೆ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಬಾಹ್ಯಾಕಾಶಕ್ಕೆ ಹೆಜ್ಜೆ: ನಾವು ಇದನ್ನು ಮಾಡಿಯೇ ತೀರುತ್ತೇವೆ. ಈ ಶಕ್ತಿ, ಈ ಉತ್ಸಾಹ, ಈ ಆತ್ಮವಿಶ್ವಾಸ ಅಸಾಧಾರಣ ಎಂದು ಮೋದಿ ಹೇಳಿದರು.
ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಪೈಲಟ್ ಅಪಹರಿಸಿ ಪತನಗೊಳಿಸಲು ಯತ್ನಿಸಿದಾಗ ಅದನ್ನು ತಡೆಯುವ ವೇಳೆ ಇರಿತಕ್ಕೊಳಗಾದ ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಬಗ್ಗೆ ಪ್ರಸ್ತಾಪಿಸಿದ ಮೋದಿ, ಇಂದು ಇಡೀ ಜಗತ್ತು ಭಾರತದ ಪೈಲಟ್ ಬಗ್ಗೆ ಚರ್ಚಿಸುತ್ತಿದೆ. ಮುಂದೊಂದು ದಿನ ಜಗತ್ತು ಭಾರತದಲ್ಲಿ ನಿರ್ಮಾಣವಾದ ವಿಮಾನಗಳ ಬಗ್ಗೆಯೂ ಮಾತನಾಡಲಿದೆ ಎಂದು ಹೇಳಿದರು.
ಈ ಗುರಿಗಳನ್ನು ದೂರದೃಷ್ಟಿಯ ಯೋಜನೆಗಳು ಮತ್ತು ನಿರಂತರ ಪ್ರಯತ್ನದ ಮೂಲಕ ಈಡೇರಿಸಲಾಗುವುದು. ಭಾರತದ ಮುಂದೆ ಸವಾಲುಗಳಿರಬಹುದು, ಆದರೆ ನಮ್ಮ ಬಳಿ 140 ಕೋಟಿ ಪರಿಹಾರಗಳೂ ಇವೆ ಎಂದು ಅವರು ಹೇಳಿದರು.
2001ರ ಅಕ್ಟೋಬರ್ 7ರಿಂದ ಮೋದಿ ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮೂರು ಅವಧಿಗಳನ್ನು ಪೂರೈಸಿ, ನಂತರ ಮೂರು ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿ ಭಾರತದ ಪ್ರಧಾನಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರದ ಮುಖ್ಯಸ್ಥನಾಗಿ 25 ವರ್ಷಗಳ ಈ ಸುದೀರ್ಘ ಪಯಣವನ್ನು ಜನರು ಸಾಧನೆ ಎಂದು ಪರಿಗಣಿಸುತ್ತಾರೆ. ಆದರೆ ನಾನು ಇದನ್ನು ಹೇಗೆ ನೋಡುತ್ತೇನೆ ಎಂದರೆ, ಇದು ವೈಯಕ್ತಿಕ ವೈಭವೀಕರಣದ ವಿಷಯವೂ ಅಲ್ಲ, ಅದಕ್ಕೆ ಇದು ಸಮಯವೂ ಅಲ್ಲ ಎಂದು ಅವರು ಹೇಳಿದರು.
ಇಂದು ನಾನು ಸತತವಾಗಿ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದೇನೆ. ಇದು ಜನರ ಆಶೀರ್ವಾದ. ನನ್ನ ಮೇಲಿಟ್ಟಿರುವ ನಂಬಿಕೆಗಾಗಿ ನಾನು ಭಾರತದ ಜನತೆಗೆ ತಲೆಬಾಗುತ್ತೇನೆ. ಜನರೇ ನನಗೆ ದೇವರು; ಕಠಿಣ ಪರಿಶ್ರಮಿ ಬಿಜೆಪಿ ಕಾರ್ಯಕರ್ತರೇ ನನ್ನ ಶಕ್ತಿ ಎಂದು ಅವರು ತಿಳಿಸಿದರು.
ಬಿಜೆಪಿ, ಎನ್‌ಡಿಎಯ ಎಲ್ಲ ಸಹೋದ್ಯೋಗಿಗಳು ಹಾಗೂ ಪ್ರಜಾಪ್ರಭುತ್ವದ ಮೇಲೆ ಗೌರವ ಹೊಂದಿರುವ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು. ತಮ್ಮ ಹಿತೈಷಿಗಳು ತಮ್ಮನ್ನು ಪ್ರೋತ್ಸಾಹಿಸಿದರೆ, ಟೀಕಿಸುವವರು ಆತ್ಮಾವಲೋಕನ ಮಾಡಿಕೊಳ್ಳಲು ಕಲಿಸಿಕೊಟ್ಟರು ಎಂದು ಅವರು ಹೇಳಿದರು.




