ತಿಲಕ ಇಟ್ಟುಕೊಂಡ್ರೆ, ಕೇಸರಿ ಶಾಲು ಹಾಕಿಕೊಂಡ್ರೆ ಅಂಧಭಕ್ತ ಆಗ್ತಾರಾ?: ರಾಹುಲ್ ಗಾಂಧಿ ಪೋಸ್ಟರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
ರಾಹುಲ್ ಗಾಂಧಿ ವಿದ್ಯಾರ್ಥಿ ಮತ್ತು 'ಅಂಧಭಕ್ತ'ನ ನಡುವಿನ ವ್ಯತ್ಯಾಸವನ್ನು ಬಿಂಬಿಸುವ ಗ್ರಾಫಿಕ್ ಪೋಸ್ಟರ್ ಹಂಚಿಕೊಂಡಿದ್ದು, ಇದರಲ್ಲಿ ಕೇಸರಿ ಶಾಲು ಮತ್ತು ತಿಲಕ ಬಳಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್...

ಬೆಂಗಳೂರು (ಅ.9): ಸಂಸತ್ತಿನ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿವಾದಾತ್ಮಕ ಗ್ರಾಫಿಕ್ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ಚೆನ್ನೈನಲ್ಲಿ ನಡೆಯಲಿರುವ 'ಛಾತ್ರೋಂ ಕೀ ಗೂಂಜ್' (#ChhatronKiGoonj) ವಿದ್ಯಾರ್ಥಿ ಸಂವಾದ ಕಾರ್ಯಕ್ರಮದ ಪ್ರಚಾರಕ್ಕಾಗಿ ಅವರು ಹಂಚಿಕೊಂಡಿರುವ ಗ್ರಾಫಿಕ್ಸ್‌ನಲ್ಲಿ, ವಿದ್ಯಾರ್ಥಿ ಹಾಗೂ 'ಅಂಧಭಕ್ತ'ನ ನಡುವಿನ ವ್ಯತ್ಯಾಸವನ್ನು ಬಿಂಬಿಸುವಾಗ ಕೇಸರಿ ಶಾಲು ಮತ್ತು ತಿಲಕವನ್ನು ಬಳಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಗೂ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
"ಅಂಧಭಕ್ತನನ್ನು ಗುರುತಿಸುವುದು ಹೇಗೆ? ಅವರಿಗೆ ಏನು ಎಂದು ಪ್ರಶ್ನಿಸಿ. ಚೆನ್ನೈ ಜನರೇ ನಿಮ್ಮ ಪ್ರಶ್ನೆ, ಕಾಳಜಿ ಮತ್ತು ಕಠಿಣ ಸವಾಲುಗಳೊಂದಿಗೆ ಬನ್ನಿ, ನಾನು ಕೇಳಲು ಕಾಯುತ್ತಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿ ಅವರು AI ಗ್ರಾಫಿಕ್ಸ್ ಚಿತ್ರಗಳ ಸಿರೀಸ್‌ಅನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗ್ರಾಫಿಕ್ಸ್‌ನಲ್ಲಿ ಏನಿದೆ?
ರಾಹುಲ್ ಗಾಂಧಿ ಅವರು ಹಂಚಿಕೊಂಡಿರುವ ಚಿತ್ರಗಳಲ್ಲಿ ಸಾಮಾನ್ಯ ವಿದ್ಯಾರ್ಥಿ ಹಾಗೂ 'ಅಂಧಭಕ್ತ'ನ ನಡುವಿನ ಹೋಲಿಕೆಯನ್ನು ಈ ಕೆಳಗಿನಂತೆ ಚಿತ್ರಿಸಲಾಗಿದೆ.
ವಿದ್ಯಾರ್ಥಿ ಆದವನು ನೀಲಿ ಮತ್ತು ಹಳದಿ ಬಣ್ಣದ ಸಾಮಾನ್ಯ ಉಡುಪು ಧರಿಸಿದ್ದು, 'ಸ್ವತಂತ್ರವಾಗಿ ಆಲೋಚಿಸುತ್ತಾನೆ' (Thinks for himself), 'ಸದಾ ಕಲಿಯುತ್ತಿರುತ್ತಾನೆ' (Keeps Learning), 'ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳುತ್ತಾನೆ' (Develops Scientific Temper), 'ಸಾಕ್ಷ್ಯಗಳನ್ನು ಹುಡುಕುತ್ತಾನೆ' (Looks for proof) ಹಾಗೂ 'ಪ್ರಶ್ನೆಗಳನ್ನು ಕೇಳುತ್ತಾನೆ' (Asks Questions) ಎಂದು ವಿವರಿಸಲಾಗಿದೆ.
ಅಂಧಭಕ್ತ ಆದವನು ಕತ್ತಿನಲ್ಲಿ ಕೇಸರಿ ಶಾಲು, ಹಣೆಗೆ ಪಟ್ಟಿ ಮತ್ತು ತಿಲಕ ಇಟ್ಟುಕೊಂಡಿರುವ ಯುವಕನಂತೆ ಚಿತ್ರಿಸಲಾಗಿದ್ದು, 'ಕುರುಡಾಗಿ ನಂಬುತ್ತಾನೆ' (Blindly Believes), 'ತನಗೆಲ್ಲವೂ ಗೊತ್ತು ಎಂದು ಭಾವಿಸುತ್ತಾನೆ' (Thinks he knows it all), 'ತರ್ಕ ಕಂಡರೆ ಕೋಪಗೊಳ್ಳುತ್ತಾನೆ' (Gets angry at logic), 'ವಾಟ್ಸಾಪ್ ಫಾರ್ವರ್ಡ್‌ಗಳನ್ನೇ ಸತ್ಯವೆಂದು ನಂಬುತ್ತಾನೆ' (Takes forwards as facts) ಹಾಗೂ 'ಸ್ಕ್ರಿಪ್ಟ್ ಅನ್ನೇ ರಿಪೀಟ್ ಮಾಡುತ್ತಾನೆ' (Repeats the script) ಎಂದು ಬಿಂಬಿಸಲಾಗಿದೆ. ಕಮಲದ ಚಿಹ್ನೆ ಹಾಗೂ ಪುಸ್ತಕ ನಿಷೇಧದ ಸಂಕೇತವನ್ನೂ ಇಲ್ಲಿ ಬಳಸಲಾಗಿದೆ.
ರಾಹುಲ್ ಗಾಂಧಿ ಪೋಸ್ಟ್‌ಗೆ ನೆಟ್ಟಿಗರ ತೀವ್ರ ಆಕ್ರೋಶ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ಹಾಗೂ ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ:
'ಹಣೆಗೆ ತಿಲಕ ಇಟ್ಟುಕೊಳ್ಳುವುದು ಈಗ ಅಂಧಭಕ್ತಿಯೇ? ಕೆಂಬ್ರಿಡ್ಜ್‌ನಲ್ಲಿ ಓದಿದ ರಾಹುಲ್ ಗಾಂಧಿ ಅವರೇ, ನೀವು ಈ ಗ್ರಾಫಿಕ್ಸ್‌ನಲ್ಲಿ ಹಿಂದೂ ಧರ್ಮದ ಸಂಕೇತಗಳನ್ನು ಮಾತ್ರ ಏಕೆ ಗುರಿ ಮಾಡುತ್ತಿದ್ದೀರಿ?' ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ಪಕ್ಷದ ಹೋರಾಟವು ಬಿಜೆಪಿ ವಿರುದ್ಧವಲ್ಲ, ಬದಲಿಗೆ ಹಿಂದೂ ಧರ್ಮದ ವಿರುದ್ಧ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಕೇಸರಿ ಮತ್ತು ತಿಲಕ ಧರಿಸಿದವರೆಲ್ಲ ಅಂಧಭಕ್ತರು ಎನ್ನುವ ಅವರ ಮನಸ್ಥಿತಿ ಖಂಡನೀಯ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
'ತಮ್ಮ ಕಳೆದುಹೋದ ಕೌಟುಂಬಿಕ ಅಧಿಕಾರವನ್ನು ಮರಳಿ ಪಡೆಯಲು ಅವರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ತಿಲಕಕ್ಕೂ ರಾಜಕೀಯಕ್ಕೂ ಏನು ಸಂಬಂಧ? ರಾಜಕೀಯ ಸಿದ್ಧಾಂತವನ್ನು ವಿಮರ್ಶಿಸಿ, ಆದರೆ ಧಾರ್ಮಿಕ ಗುರುತನ್ನಲ್ಲ" ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
'ನಿಮ್ಮ ಹಿಂದೂ ದ್ವೇಷ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ನಮಗೂ ಬದಲಾವಣೆ ಬೇಕು, ಆದರೆ ಹಿಂದುತ್ವ ಎಂದರೆ ಬರೀ ಬಿಜೆಪಿಯಷ್ಟೇ ಅಲ್ಲ. ಹಿಂದೂಗಳನ್ನು ಗುರಿ ಮಾಡಿ ವೋಟ್ ಬ್ಯಾಂಕ್ ರಾಜಕೀಯ ಮಾಡುವುದು ಶೋಚನೀಯ" ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮಕ್ಕೆ ಪ್ರಚಾರ ಗಿಟ್ಟಿಸಲು ಹೊರಟ ರಾಹುಲ್ ಗಾಂಧಿ ಅವರ ಈ ಪೋಸ್ಟರ್, ಧಾರ್ಮಿಕ ಸಂಕೇತಗಳನ್ನು ಅವಮಾನಿಸಿದೆ ಎಂಬ ಭಾರಿ ವಿವಾದಕ್ಕೆ ಸಿಲುಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸ್ಮಿತ್ ಮಚ್ಚಾರ್ ಬಗ್ಗೆ ವಿಶ್ವವೇ ಕೊಂಡಾಡಿದರೂ ಕಾಂಗ್ರೆಸ್, ರಾಹುಲ್ ಗಾಂಧಿ ಮೌನ
ಇದೇ ಕಾಮೆಂಟ್ಸ್‌ಗಳಲ್ಲಿ ರಾಹುಲ್ ಗಾಂಧಿ ದ್ವಿಮುಖ ನೀತಿಯನ್ನೂ ಕೆಲವರು ಟೀಕಿಸಿದ್ದಾರೆ. ಮುಸ್ಲಿಂ ಭಯೋತ್ಪಾದಕನ ವಿರುದ್ಧ ವಿಮಾನದಲ್ಲೇ ಹೋರಾಟ ಮಾಡಿ 180ಕ್ಕೂ ಅಧಿಕ ಇಸ್ರೇಲಿಗರ ಪ್ರಾಣ ಉಳಿಸಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಗ್ಗೆ ವಿಶ್ವವೇ ಕೊಂಡಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಸೇರಿದಂತೆ ದೇಶದ ಸಾಕಷ್ಟು ಗಣ್ಯರು ಸ್ಮಿತ್ ಸಾಹಸವನ್ನು ನೆನೆದಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವಾಗಲಿ ರಾಹುಲ್ ಗಾಂಧಿಯಾಗಲಿ ಈವರೆಗೂ ಸ್ಮಿತ್ ಮಚ್ಚಾರ್ ಬಗ್ಗೆ, ಅವರ ಸಾಹಸವನ್ನು ಹೊಗಳಿ ಒಂದೂ ಮಾತನಾಡಿಲ್ಲ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತಿದೆ ಎಂದು ಬರೆದಿದ್ದಾರೆ.




