ಮಂಗಳೂರು: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದಳಾ ಮಗಳು, 2 ತಿಂಗಳ ಬಳಿಕ ಚರ್ಚ್‌ನಿಂದ ಮೃತದೇಹ ಹೊರತೆಗೆದ ಪೊಲೀಸರು!
ಮಂಗಳೂರಿನಲ್ಲಿ ಆಸ್ತಿಗಾಗಿ ಹೆತ್ತ ತಂದೆ ಆಲ್ಬರ್ಟ್ ರೇಗೋ ಅವರನ್ನು ಮಗಳು ಮಾಯಾ ತನ್ನ ಪ್ರೇಮಿಯೊಂದಿಗೆ ಸೇರಿ ಕೊ*ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ದಫನ ಮಾಡ...

ಮಂಗಳೂರು: ಆಸ್ತಿಯ ಆಸೆಗಾಗಿ ಮಗಳು ತನ್ನ ಪ್ರೇಮಿಯೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಮಾಧಿ ಮಾಡಲಾಗಿದ್ದ ಮೃತದೇಹವನ್ನು ಎರಡು ತಿಂಗಳ ನಂತರ ಹೊರತೆಗೆದು ಮರುತನಿಖೆ ನಡೆಸುತ್ತಿರುವ ದಿಗಿಲು ಹುಟ್ಟಿಸುವ ಘಟನೆಯೊಂದು ಮಂಗಳೂರಿನಲ್ಲಿ ವರದಿಯಾಗಿದೆ. ಮಂಗಳೂರಿನ ದೆರೆಬೈಲ್ ಚರ್ಚ್‌ನ ಸ್ಮಶಾನದಿಂದ ಮೃತದೇಹವನ್ನು ಹೊರತೆಗೆದಿರುವ ಉರ್ವ ಠಾಣೆ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಸಾವಿನ ಬಗ್ಗೆ ಅನುಮಾನ ಬರಲು ಕಾರಣವೇನು?
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿಯಾಗಿದ್ದ ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19 ರಂದು ನಿಗೂಢವಾಗಿ ಮೃತಪಟ್ಟಿದ್ದರು. ಆಲ್ಬರ್ಟ್ ಅವರಿಗೆ ನಾಲ್ವರು ಮಕ್ಕಳಿದ್ದು, ಅವರಿಗಾಗಿ ಸಾಕಷ್ಟು ಆಸ್ತಿಯನ್ನು ಗಳಿಸಿಟ್ಟಿದ್ದರು. ಅವರಲ್ಲಿ ಇಬ್ಬರು ಮಕ್ಕಳು ದುಬೈನಲ್ಲಿ ನೆಲೆಸಿದ್ದರೆ, ಆಲ್ಬರ್ಟ್ ಅವರು ತಮ್ಮ ಮಗಳು ಮಾಯಾ ರೇಗೂ ಜೊತೆ ಮಂಗಳೂರಿನ ಮನೆಯಲ್ಲೇ ವಾಸಿಸುತ್ತಿದ್ದರು. ಆಲ್ಬರ್ಟ್ ರೇಗೋ ಮೃತಪಟ್ಟ ಸಂದರ್ಭದಲ್ಲಿ ಮಗಳು ಮಾಯಾ ರೇಗೂ ಸಂಬಂಧಿಕರಿಗಾಗಲಿ ಅಥವಾ ನೆರೆಹೊರೆಯವರಿಗಾಗಲಿ ಯಾವುದೇ ವಿಷಯ ತಿಳಿಸದೆ, ಕ್ರೈಸ್ತ ಸಂಪ್ರದಾಯದಂತೆ ದೇರೆಬೈಲ್ ಚರ್ಚ್‌ನಲ್ಲಿ ಮೃತದೇಹವನ್ನು ದಫನ ಮಾಡಿದ್ದಳು.
ಮಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು
ಆಲ್ಬರ್ಟ್ ರೇಗೋ ಅವರ ಸಾವಿನ ಕುರಿತು ಹಾಗೂ ಮಗಳ ಇತ್ತೀಚಿನ ನಡೆವಳಿಕೆಗಳ ಬಗ್ಗೆ ಸಂಶಯಗೊಂಡ ಆಲ್ಬರ್ಟ್ ಅವರ ಆಪ್ತ ಸ್ನೇಹಿತರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ತಾನು ಮಾಡಿದ ತಪ್ಪು ಬಯಲಿಗೆ ಬರುವ ಲಕ್ಷಣಗಳು ಕಂಡುಬಂದಾಗ ಆಕೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಳು. ಆಲ್ಬರ್ಟ್ ಅವರಿಗೆ ಆಕೆ ಅದೇ ಮಾತ್ರೆಗಳನ್ನು ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಕುಟುಂಬದ ಸ್ನೇಹಿತ ಹೆರಾಲ್ಡ್ ಪೆರೇರಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಮಾಯಾ ರೇಗೂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಜೈ ಆನೆಗುಡ್ಡೆಯ ನಿವಾಸಿ ಮಾನವ ಹಕ್ಕುಗಳ ಕಾರ್ಯಕರ್ತ ಅಜಯ್ ಕ್ರಿಸ್ಟೋಫರ್ ಡಿ'ಸಿಲ್ವಾ ಮತ್ತು ಹೆರಾಲ್ಡ್ ಪೆರೇರಾ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.
ದೂರಿನಲ್ಲಿ ವ್ಯಕ್ತವಾಗಿರುವ ಪ್ರಮುಖ ಆರೋಪಗಳು:
ಆಲ್ಬರ್ಟ್ ಅವರು ಮೃತಪಡುವುದಕ್ಕೂ ಮುನ್ನ ತಮ್ಮ ನಾಲ್ವರು ಮಕ್ಕಳಿಗೆ ಸಮನಾಗಿ ಆಸ್ತಿಯನ್ನು ಹಂಚಿಕೆ ಮಾಡಿ ವಿಲ್ ಮಾಡಿಸಿದ್ದರು. ಆದರೆ ಅದನ್ನು ಹರಿದು ಹಾಕಿ, ತಂದೆ ಸಾಯುವ ಮುನ್ನ ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಮಾಯಾ ಬಲವಂತವಾಗಿ ವಿಲ್ ಬರೆಸಿಕೊಂಡಿದ್ದಾಳೆ. ಅದಕ್ಕಾಗಿ ಆಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾಳೆ. ಆಸ್ತಿ ಸಂಪೂರ್ಣವಾಗಿ ತನಗೆ ಸಿಗಬೇಕೆಂಬ ಉದ್ದೇಶದಿಂದ ತನ್ನ ಬಾಯ್‌ಫ್ರೆಂಡ್ ಜೊತೆಗೂಡಿ ತಂದೆಯನ್ನೇ ಕೊಂ**ದಿರುವ ಬಲವಾದ ಶಂಕೆ ಇದೆ ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.
ಅಲ್ಲದೆ, ತಂದೆ ಅಸ್ವಸ್ಥಗೊಂಡಾಗ ಮನೆಯಿಂದ ಕೇವಲ 500 ಮೀಟರ್ ಅಂತರದಲ್ಲೇ ದೊಡ್ಡ ಆಸ್ಪತ್ರೆಯಿದ್ದರೂ, ಅಲ್ಲಿಗೆ ಕರೆದೊಯ್ಯದೆ ಸುಮಾರು 4 ರಿಂದ 5 ಕಿಲೋಮೀಟರ್ ದೂರದಲ್ಲಿದ್ದ ಬೊಂದೇಲ್‌ನ ಖಾಸಗಿ ವೈದ್ಯರ ಬಳಿಗೆ ಕೊಂಡೊಯ್ದು ಸಾವು ಖಚಿತಪಡಿಸಿಕೊಂಡಿದ್ದಾಳೆ. ತಂದೆಯ ಮರಣದ ನಂತರ ಸ್ಥಳೀಯ ಕೆಲವು ಪೊಲೀಸರ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪವಿದೆ.
ಮರುತನಿಖೆ ಮತ್ತು ಎಫ್‌ಎಸ್‌ಎಲ್ ಪರೀಕ್ಷೆ
ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದರಿಂದ ಆಲ್ಬರ್ಟ್ ರೇಗೋ ಅವರ ಸಾವಿನ ಬಗ್ಗೆ ಸುತ್ತಮುತ್ತಲಿನ ನಿವಾಸಿಗಳಿಗೂ ಅನುಮಾನಗಳು ಹೆಚ್ಚಾಗಿದ್ದವು. ನ್ಯಾಯಾಲಯ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ನಂತರ, ದೆರೆಬೈಲ್ ಚರ್ಚ್‌ನ ಸ್ಮಶಾನದಲ್ಲಿ ಹೂಳಲಾಗಿದ್ದ ಮೃತದೇಹವನ್ನು ಬುಧವಾರ ಹೊರತೆಗೆಯಲಾಯಿತು.
ಸ್ಥಳೀಯ ತಹಸೀಲ್ದಾರ್ ಹಾಗೂ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ದೇಹದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಫ್‌ಎಸ್‌ಎಲ್ (FSL) ವರದಿ ಬಂದ ನಂತರವೇ ಆಲ್ಬರ್ಟ್ ರೇಗೋ ಅವರದ್ದು ನೈಸರ್ಗಿಕ ಸಾವೋ ಅಥವಾ ಮಗಳೇ ಮುಗಿಸಿದ್ದಾಳೋ ಎಂಬ ಸತ್ಯಾಂಶ ತಿಳಿಯಲಿದೆ. ಈ ಘಟನೆಯು ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.




