ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಕೃಷಿ ಹೊಂಡದಲ್ಲಿ ಮುಳುಗಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳ ದಾರುಣ ಅಂತ್ಯ: ಆಂಜನೇಯಸ್ವಾಮಿ ಪೂಜೆಗೆ ತೆರಳಿದ್ದ ವೇಳೆ ದುರಂತ

ಚಿಕ್ಕಬಳ್ಳಾಪುರ: ಜಮೀನಿನಲ್ಲಿದ್ದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ(Farm Pond) ಶವವಾಗಿ ಪತ್ತೆಯಾಗಿರುವ ಕರುಣಾಜನಕ ಘಟನೆ ಚಿಂತಾಮಣಿ(Chinta...

· ಚಿಕ್ಕಬಳ್ಳಾಪುರ
ಆಂಜನೇಯಸ್ವಾಮಿ ಪೂಜೆಗೆ ತೆರಳಿದ್ದಾಗ ದುರಂತ: ಕೃಷಿ ಹೊಂಡದಲ್ಲಿ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳ ದಾರುಣ ಸಾವು
ಹಂಚಿಕೊಳ್ಳಿ:

ಚಿಕ್ಕಬಳ್ಳಾಪುರ: ಚಿಂತಾಮಣಿ(Chintamani) ತಾಲೂಕಿನ ಹುಸೇನಪುರ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಲು ಹೋದ ತಾತ ಮತ್ತು ಇಬ್ಬರು ಮೊಮ್ಮಕ್ಕಳು ಕೃಷಿ ಹೊಂಡದಲ್ಲಿ(Farm Pond) ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.

ಹುಸೇನಪುರ ಗ್ರಾಮದ ನಿವಾಸಿಗಳಾದ ಮುನಿನಾರಾಯಣಪ್ಪ (60) ಹಾಗೂ ಅವರ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಮೃತಪಟ್ಟ ದುರ್ದೈವಿಗಳು. ಒಂದೇ ಕುಟುಂಬದ ಮೂವರು ಸದಸ್ಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಮುನಿನಾರಾಯಣಪ್ಪ ಅವರು ಪ್ರತಿ ಶನಿವಾರ ತಮ್ಮ ಜಮೀನಿನಲ್ಲಿದ್ದ ಆಂಜನೇಯಸ್ವಾಮಿ ಗುಡಿಗೆ(Anjaneya Swamy Gudi) ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಶನಿವಾರ ಬೆಳಗ್ಗೆ ಪೂಜೆಗೆಂದು ಜಮೀನಿಗೆ ಹೊರಟಾಗ, ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ತಾವೂ ಬರುತ್ತೇವೆ ಎಂದು ಹಠ ಹಿಡಿದು ಅವರೊಂದಿಗೆ ತೆರಳಿದ್ದರು.

ಬೆಳಗ್ಗೆ 9 ರಿಂದ 10 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಟವರು ಸಂಜೆಯಾದರೂ ಮನೆಗೆ ಮರಳದ ಕಾರಣ ಗಾಬರಿಗೊಂಡ ಕುಟುಂಬದವರು ಜಮೀನಿನಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ದೇವಸ್ಥಾನದ ಸಮೀಪವಿರುವ ಅಶ್ವತ್ಥಪ್ಪ ಎಂಬುವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರ ಮೃತದೇಹಗಳು ತೇಲುತ್ತಿರುವುದು ಪತ್ತೆಯಾಗಿದೆ.

ತಾತ ಪೂಜೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳು ಆಟವಾಡುತ್ತಲೋ ಅಥವಾ ನೀರು ತರಲು ಕೃಷಿ ಹೊಂಡದ ಬಳಿ ತೆರಳಿ ಕಾಲುಜಾರಿ ಬಿದ್ದಿರಬಹುದು. ಮೊಮ್ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರನ್ನು ಉಳಿಸಲು ಹೋದ ಮುನಿನಾರಾಯಣಪ್ಪ ಕೂಡ ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದೆ. ಕೃಷಿ ಹೊಂಡದ ಹತ್ತಿರ ವಿದ್ಯುತ್ ತಂತಿಗಳು ಹಾಗೂ ಪಂಪ್‌ಸೆಟ್ ಇದ್ದು, ವಿದ್ಯುತ್ ಸ್ಪರ್ಶದಿಂದ ಈ ಅವಘಡ ಸಂಭವಿಸಿರಬಹುದೇ ಎಂಬ ಅನುಮಾನವನ್ನೂ ಕುಟುಂಬದವರು ವ್ಯಕ್ತಪಡಿಸಿದ್ದಾರೆ.

ಮೃತ ಯಶ್ವಿನ್, ಮುನಿನಾರಾಯಣಪ್ಪ ಅವರ ಮಗ ನಂದೀಶ್ ಅವರ ಮಗನಾಗಿದ್ದರೆ, ಪ್ರಜ್ವಲ್ ಅವರು ಮುನಿನಾರಾಯಣಪ್ಪ ಅವರ ಸಹೋದರ ವೆಂಕಟರೋಣಪ್ಪ ಅವರ ಪುತ್ರ ನಾರಾಯಣಸ್ವಾಮಿ ಅವರ ಮಗನೆಂದು ತಿಳಿದುಬಂದಿದೆ. ಮುದ್ದಿನ ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಮನೆಯಿಂದ ತೆರಳಿದ್ದ ತಾತ ಮೃತದೇಹವಾಗಿ ಮರಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಂಚಿಕೊಳ್ಳಿ: