ಧಮ್ ಇದ್ರೆ ಅಜ್ಜಯ್ಯನ ಮುಂದೆ ಪ್ರಮಾಣ ಮಾಡಿ – ಚಲುವರಾಯಸ್ವಾಮಿಗೆ ಸುರೇಶ್ ಗೌಡ ಸವಾಲ್!
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ನಾಗಮಂಗಲದ (Nagamangala) ಬಗರ್‌ಹುಕುಂ ಭೂಮಿ (Bagar-Hukum Land) ಮಂಜೂರಾತಿ ರದ್ದು ಪ್ರಕರಣ ಈಗ ಕೈ-ದಳ ನಾಯಕರ ನಡುವಿನ ಸಮರಕ್ಕೆ ನ...

ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಇದೀಗ ಆಣೆ-ಪ್ರಮಾಣದ ರಾಜಕೀಯಕ್ಕೆ ಚಾಲನೆ ದೊರೆತಿದೆ. ನಾಗಮಂಗಲದ (Nagamangala) ಬಗರ್‌ಹುಕುಂ ಭೂಮಿ (Bagar-Hukum Land) ಮಂಜೂರಾತಿ ರದ್ದಾದ ಪ್ರಕರಣವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಜಗಳಕ್ಕೆ ದಾರಿ ಮಾಡಿಕೊಟ್ಟಿದೆ. ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ಧೈರ್ಯವಿದ್ದರೆ ಅಜ್ಜಯ್ಯನ ಸನ್ನಿಧಿಯಲ್ಲಿ ಆಣೆ ಮಾಡುವಂತೆ ಸಾರ್ವಜನಿಕ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, ರೈತರಿಂದ ಒಂದು ರೂಪಾಯಿ ಲಂಚ ಪಡೆದಿದ್ದು ಸಾಬೀತಾದಲ್ಲಿ ಕತ್ತು ಕೊಯ್ದುಕೊಂಡು ಸೂಸೈಡ್ ಮಾಡಿಕೊಳ್ಳುವುದಾಗಿಯೂ ಅವರು ಸವಾಲು ಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಸಂಘರ್ಷ ಹೊಸ ತಿರುವು ಪಡೆದಿದೆ. ಜೆಡಿಎಸ್‌ನ ಸುರೇಶ್ ಗೌಡ (Suresh Gowda) ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ಯೋಜನೆಯಡಿ ರೈತರಿಗೆ ನೀಡಲಾಗಿದ್ದ ಸಾಗುವಳಿ ಚೀಟಿಗಳನ್ನು ಜಿಲ್ಲಾಡಳಿತ ಏಕಾಏಕಿ ರದ್ದುಗೊಳಿಸಿರುವುದಕ್ಕೆ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಅವರೇ ಕಾರಣ ಎಂದು ಜೆಡಿಎಸ್ ದೂರಿದೆ. ಸಚಿವರ ಸೇಡಿನ ರಾಜಕಾರಣದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮತ್ತೊಂದೆಡೆ ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸುರೇಶ್ ಗೌಡ ಅವರು ಆಣೆ ಪ್ರಮಾಣಕ್ಕೂ ಬಹಿರಂಗ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಪ್ರೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ದುರ್ಮರಣ
ಅರ್ಜಿ ಸಲ್ಲಿಸಿದ್ದ ರೈತರ ಅರ್ಹತೆ ಮತ್ತು ಹಿನ್ನೆಲೆಯನ್ನು ಪರಿಶೀಲಿಸಿ, ಯಾವುದೇ ಪಕ್ಷಪಾತವಿಲ್ಲದೆ ಸಾಗುವಳಿ ಪತ್ರಗಳನ್ನು ನೀಡಲಾಗಿತ್ತು. ಆದರೆ, ಸಚಿವ ಚಲುವರಾಯಸ್ವಾಮಿ ಅವರು ದುರುದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಾಗುವಳಿ ಪತ್ರವನ್ನು ರದ್ದುಗೊಳಿಸಿದ್ದಾರೆ ಎಂಬುದು ಸುರೇಶ್ ಗೌಡ ಅವರ ಗಂಭೀರ ಆರೋಪವಾಗಿದೆ. ರೈತರಿಂದ ನಾನು ಒಂದು ರೂಪಾಯಿ ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ಅಥವಾ ಜಮೀನು ಮಂಜೂರಾತಿ ವಿಷಯದಲ್ಲಿ ನಾನು ತಪ್ಪು ಮಾಡಿದ್ದರೆ ಸಾರ್ವಜನಿಕವಾಗಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಚಲುವರಾಯಸ್ವಾಮಿಗೆ ತಾಕತ್ತಿದ್ದರೆ, ತಾನು ತಪ್ಪು ಮಾಡಿಲ್ಲ ಎಂದಾದರೆ ಅಜ್ಜಯ್ಯನ ಮುಂದೆ ಪ್ರಮಾಣ ಮಾಡಲಿ. ಅವರು ತಿಳಿಸುವ ಸ್ಥಳಕ್ಕೆ ಬಂದು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಇನ್ನು ಮಂಜೂರಾತಿ ರದ್ದುಗೊಳಿಸಿದ ಆದೇಶವನ್ನು ಹಿಂತೆಗೆದುಕೊಳ್ಳಲು 10 ದಿನಗಳ ಗಡುವು ನೀಡಿದ್ದಾರೆ. 10 ದಿನದ ಒಳಗಾಗಿ ಆದೇಶ ವಾಪಸ್ ಪಡೆಯಬೇಕು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ವಾದ ಮಂಡಿಸಲು ರೈತರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಅಮರಣಾಂತ ಉಪವಾಸ ಕೂರುವುದಾಗಿ ಹೇಳಿದ ಸುರೇಶ್ ಗೌಡ, ರೈತರಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್, ಬರಪೀಡಿತ ಹಳ್ಳಿಗಳ ಪರಿಶೀಲನೆ
ಒಟ್ಟಾರೆಯಾಗಿ ಬಗರ್ ಹುಕುಂ ಜಮೀನು ವಿಚಾರ ಸಕ್ಕರೆ ನಾಡಿನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಸುರೇಶ್ ಗೌಡ ಅವರ 10 ದಿನಗಳ ಡೆಡ್ ಲೈನ್‌ಗೆ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತ ಹೇಗೆ ಸ್ಪಂದಿಸುತ್ತದೆ? ಅಜ್ಜಯ್ಯನ ಪ್ರಮಾಣದ ಸವಾಲನ್ನು ಸಚಿವರು ಸ್ವೀಕರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: Asian Games 2026: ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಅರಸ್




