ಜಾರಕಿಹೊಳಿ ಕೇಸ್‌ನಲ್ಲಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಅಂತ ಜನಕ್ಕೆ ಚೆನ್ನಾಗಿ ಗೊತ್ತು: ವಿಜಯೇಂದ್ರ ತಿರುಗೇಟು!
ಬಾಗಲಕೋಟೆ: ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಯಾರು ಸ್ಟಿಂಗ್ ಆಪರೇಷನ್ ಮಾಡಿಸಿದರು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬಾಗಲಕೋಟೆ: ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬುದು ರಾಜ್ಯದ ಸಮಸ್ತ ಜನರಿಗೆ ಅರಿವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಸಚಿವರು ಸ್ಟಿಂಗ್ ಆಪರೇಷನ್ ಬಗ್ಗೆ ಜಾಗರೂಕರಾಗಿರಬೇಕು ಎಂಬ ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ ವಿಜಯೇಂದ್ರ, ತಮ್ಮದೇ ಪಕ್ಷದ ಶಾಸಕರ ಮೇಲೆ ಸ್ಟಿಂಗ್ ಮಾಡಿಸುತ್ತಾರೋ ಅಥವಾ ಡಿಂಗ್ ಆಪರೇಷನ್ ಮಾಡಿಸುತ್ತಾರೋ? ಇವೆಲ್ಲದರ ಹಿಂದಿರುವ ರೂವಾರಿಗಳು ಯಾರು ಎಂಬುದು ಜನರಿಗೆ ಗೊತ್ತಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾರು ಸ್ಟಿಂಗ್ ಮಾಡುತ್ತಾರೆ ಮತ್ತು ಎಂತಹ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತಿಳಿಯಲಿದೆ ಎಂದು ನುಡಿದರು.
2028ರಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ನಾನೇ ಸಿಎಂ ಆಗುತ್ತೇನೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಅವರು ಸಿಎಂ ಆಗುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ಡಿಕೆಶಿ ಅವರೇ, ಮೊದಲು ಈ ಸ್ಟಿಂಗ್ ಆಪರೇಷನ್ ನಿಲ್ಲಿಸಿ ಜನರಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸಿ. ಅವರನ್ನು ಸಿಎಂ ಮಾಡಲು ಸಿದ್ದರಾಮಯ್ಯ ಅವರು ಅವಕಾಶ ಕೊಡಬೇಕಲ್ಲವೇ? ಈಗಾಗಲೇ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಬರೆದ ಪತ್ರ, ರಾಯರೆಡ್ಡಿ ಅವರ ಹೇಳಿಕೆ ಹಾಗೂ ಬಿ.ಆರ್. ಪಾಟೀಲ್ ಅವರ ಅಸಮಾಧಾನ ಗಮನಿಸಿದರೆ ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲರೂ ಆಂತರಿಕ ಬಂಡಾಯ ಏಳುತ್ತಿರುವುದು ವೇದ್ಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಡಿಕೆಶಿ ಅವರಿಗೆ ನೆಮ್ಮದಿಯಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲೂ ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯ ಸಾರಿಗೆ ಸಂಸ್ಥೆಯ ದುಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಎಸ್‌ಆರ್‌ಟಿಸಿಗೆ ಸರ್ಕಾರ 6,500 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ಹಣ ಬಿಡುಗಡೆ ಕೋರಿ ಕೆಎಸ್‌ಆರ್‌ಟಿಸಿ ಎಂಡಿ ಸ್ವತಃ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ಇಂದು ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಸಾಧ್ಯವಾಗುತ್ತಿಲ್ಲ, ಲೇಬರ್ ಹಾಗೂ ಕ್ಲೀನರ್‌ಗಳಿಗೆ ಸಕಾಲದಲ್ಲಿ ವೇತನ ನೀಡಲು ಈ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ಆರ್ಥಿಕ ದಿವಾಳಿತನವನ್ನು ಟೀಕಿಸಿದರು.
ಎಸ್.ಐ.ಆರ್ ಪ್ರತಿಭಟನೆ ಕುರಿತು ಮಾತನಾಡುತ್ತಾ, ರಾಹುಲ್ ಗಾಂಧಿಗೆ ತಮ್ಮೊಬ್ಬರ ಬಲದಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಅದಕ್ಕಾಗಿಯೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.




