ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಭೀತಿ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳವಾದ ಜೋಯಿಡಾ, ಗಣೇಶ ಗುಡಿ ಭಾಗದ ಕಾಳಿ ನದಿಯಲ್ಲಿ (Kali River) ಮೊಸಳೆಗಳು ಹೆಚ್ಚಾಗಿದ್ದು, ಆತಂಕ ತಂದೊಡ್ಡಿವೆ. ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ...

· ಉತ್ತರ ಕನ್ನಡ
ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆತಂಕ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ
ಹಂಚಿಕೊಳ್ಳಿ:

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಜೋಯಿಡಾ ಮತ್ತು ಗಣೇಶ ಗುಡಿ ಪ್ರದೇಶದ ಕಾಳಿ ನದಿಯಲ್ಲಿ (Kali River) ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ‍್ಯಾಫ್ಟಿಂಗ್‌, ಕಯಾಕಿಂಗ್, ಬೋಟಿಂಗ್ ಹಾಗೂ ರಿಪವರ್ ಸ್ವಿಮ್ಮಿಂಗ್ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಜಲಸಾಹಸ ಕ್ರೀಡೆ (Water Adventure Sports) ನಡೆಯುವ ಸ್ಥಳದಲ್ಲೇ ಮೊಸಳೆ ಕಂಡುಬಂದಿರುವುದು ಭಯದ ವಾತಾವರಣ ಸೃಷ್ಟಿಸಿದೆ.

ಹಿಂದೆ ಕಾಳಿ ನದಿಯ ಈ ಭಾಗದಲ್ಲಿ ಮೊಸಳೆಗಳ ಹಾವಳಿ ಇರಲಿಲ್ಲ. ಹೆಚ್ಚಾಗಿ ದಾಂಡೇಲಿ ನಗರದ ಕಾಳಿ ನದಿ ಪಾತ್ರದಲ್ಲಿ ಮೊಸಳೆಗಳು ಕಂಡುಬರುತ್ತಿದ್ದವು. ಆದರೆ ಈಗ ಗಣೇಶ ಗುಡಿಯ ಡ್ಯಾಮ್‌ನ ಕೆಳಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ಆತಂಕದ ನಡುವೆ ಇಲ್ಲ ಕ್ರಮ.

ಗಣೇಶ ಗುಡಿಯ ಇಳವಾ ಕಾಳಿ ನದಿ ಪ್ರದೇಶವು ಜಲಸಾಹಸ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸಿ ಜಲಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದೀಗ ಇಲ್ಲಿಯೇ ಮೊಸಳೆಗಳು ಕಾಣಿಸಿಕೊಂಡಿವೆ. ಹೀಗಾಗಿ, ಮುಂದೆ ಮೊಸಳೆಗಳು ನೀರಿಗಿಳಿಯುವ ಪ್ರವಾಸಿಗರ ಮೇಲೆ ದಾಳಿ ಮಾಡಿದರೆ ಏನು ಗತಿ ಎಂಬ ಪ್ರಶ್ನೆ ಉದ್ಭವಿಸಿದೆ.

ದಾಂಡೇಲಿ ನಗರದ ಕಾಳಿ ನದಿ ತೀರದಲ್ಲಿ ಜನರು ನೀರಿಗೆ ಇಳಿಯದಂತೆ ಮೊಸಳೆಗಳ ಬಗ್ಗೆ ಎಚ್ಚರಿಕೆ ನೀಡುವ ನಾಮಫಲಕಗಳನ್ನು ಅಳವಡಿಸಲಾಗಿದೆ. ಜೊತೆಗೆ ಮೊಸಳೆಗಳು ಬರದಂತೆ ಕಬ್ಬಿಣದ ಜಾಲಿಗಳನ್ನು ಹಾಕಲಾಗಿದೆ. ಆದರೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಇಳವಾ ಜಲಸಾಹಸ ಕ್ರೀಡಾ ಪ್ರದೇಶದಲ್ಲಿ ಮೊಸಳೆಗಳ ಓಡಾಟದ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಿದ್ದರೂ, ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸುವ ಅಥವಾ ಜನರಿಗೆ ಸೂಚನೆ ನೀಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ. ಕನಿಷ್ಠಪಕ್ಷ ಪದೇ ಪದೇ ಕಾಣಿಸಿಕೊಳ್ಳುವ ಬೃಹತ್ ಗಾತ್ರದ ಮೊಸಳೆಯನ್ನು ಸೆರೆಹಿಡಿಯುವ ಪ್ರಯತ್ನವನ್ನೂ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.

ಒಂದು ವೇಳೆ ಮೊಸಳೆ ಪ್ರವಾಸಿಗರ ಮೇಲೆ ದಾಳಿ ನಡೆಸಿದರೆ ಏನು ಗತಿ ಎಂಬ ಆತಂಕ ಎದುರಾಗಿದೆ. ಈಗ ದಸರಾ ರಜೆ ಇರುವುದರಿಂದ ಅನೇಕ ಪ್ರವಾಸಿಗರು ದಾಂಡೇಲಿಯತ್ತ ಆಗಮಿಸುತ್ತಿದ್ದಾರೆ. ಹೀಗಾಗಿ ದಾಂಡೇಲಿ ಮತ್ತು ಜೋಯಿಡಾ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಅವರು ಎಚ್ಚರಿಕೆಯಿಂದ ಇಲ್ಲದಿದ್ದರೆ ಅನಾಹುತ ಸಂಭವಿಸುವುದು ಖಚಿತ ಎಂಬಂತಾಗಿದೆ.

ಹಂಚಿಕೊಳ್ಳಿ: