ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು – ಮಗುವಿನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತು!
ಚಿಕ್ಕಮಗಳೂರು: ಕೆರೆಯಲ್ಲಿ (Lake) ಈಜಲು (Swimming) ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಮರ್ಲೆ ಗ್ರಾಮದಲ್ಲಿ ನಡೆದಿದೆ. ಮ...

ಚಿಕ್ಕಮಗಳೂರು (Chikkamagaluru) ತಾಲೂಕಿನ ಮರ್ಲೆ ಗ್ರಾಮದಲ್ಲಿ ಕೆರೆಯಲ್ಲಿ (Lake) ಈಜಲು (Swimming) ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ಸಂಭವಿಸಿದೆ.
ಮೃತಪಟ್ಟ ಮಕ್ಕಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಅವರೆಲ್ಲರಿಗೂ 12 ವರ್ಷ ವಯಸ್ಸಾಗಿತ್ತು. ಇವರೆಲ್ಲರೂ ವಿವಿಧ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಸರಾ ರಜೆ ಇದ್ದ ಕಾರಣದಿಂದ ಮಕ್ಕಳು ಕೆರೆಯಲ್ಲಿ ಈಜಲು ಹೋಗಿದ್ದರು.
ಗ್ರಾಮದ ಕೆರೆಯ ಬಳಿ ಮಹಿಳೆಯರು ಬಟ್ಟೆ ಮತ್ತು ಪಾತ್ರೆ ತೊಳೆಯಲು ನಿರ್ಮಿಸಲಾದ ಕಟ್ಟೆಗಳ ಸಮೀಪ ಈಜುತ್ತಿದ್ದಾಗ ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೆರೆಯ ಬಳಿ ಜಮಾಯಿಸಿದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸಾಲಾಗಿ ಇರಿಸಲಾದ ಪುಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಕಳೆದ ವರ್ಷ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ನೀರಿನ ಆಳ ಹೆಚ್ಚಾಗಿತ್ತು. ಆಳದ ಬಗ್ಗೆ ಅರಿವಿಲ್ಲದ ಮಕ್ಕಳು ಈಜಲು ಹೋಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




