ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಕರ್ನಾಟಕ

ಮುಂದಿನ 7-8 ತಿಂಗಳು ಕಠಿಣ ದಿನಗಳೇ? – ನೀರನ್ನು ಮಿತವಾಗಿ ಬಳಸಲು ಕೃಷಿ ಸಚಿವರ ಮನವಿ!

– ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಮಡಿಕೇರಿ: ಮುಂದಿನ 7-8 ತಿಂಗಳು ಕಠಿಣ ದಿನಗಳನ್ನು ಎದುರಿಸಬೇಕಾಗಬಹುದು, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಎಂದು ಕೃ...

· ಕೊಡಗು
ಮುಂದಿನ 7-8 ತಿಂಗಳು ಕಠಿಣ ದಿನಗಳನ್ನ ಎದುರಿಸಬೇಕಾಗಬಹುದು – ನೀರಿನ ಮಿತ ಬಳಕೆಗೆ ಕೃಷಿ ಸಚಿವರ ಕರೆ
ಹಂಚಿಕೊಳ್ಳಿ:

– ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ

ಮಡಿಕೇರಿ: ಮುಂಬರುವ 7-8 ತಿಂಗಳು ಸವಾಲಿನ ದಿನಗಳಾಗಿರಲಿದ್ದು, ಮುಂದಿನ ಅವಧಿಯಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಇಳಿಕೆಯಾಗಬಹುದು ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನದಲ್ಲಿನ ಬದಲಾವಣೆ, ತಾಪಮಾನದ ಏರಿಕೆ ಹಾಗೂ ಎಲ್-ನಿನೋ ಪ್ರಭಾವದಿಂದ ಮಳೆಯ ಪ್ರಮಾಣ ಮತ್ತು ಸ್ವರೂಪದಲ್ಲಿ ವ್ಯತ್ಯಾಸವಾಗುವ ಸಂಭವವಿದೆ. ನೀರಿನ ಅಭಾವದ ಜೊತೆಗೆ ಆಹಾರ ಉತ್ಪಾದನೆ ಮತ್ತು ತರಕಾರಿ ದರಗಳ ಮೇಲೆಯೂ ಇದು ದುಷ್ಪರಿಣಾಮ ಬೀರಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಜಾಗತಿಕವಾಗಿ ತಾಪಮಾನ ಹೆಚ್ಚುತ್ತಿದೆ. ಎಲ್-ನಿನೋ ಕಾರಣದಿಂದ ಮೋಡಗಳ ಚಲನೆಯಲ್ಲಿಯೂ ಬದಲಾವಣೆಗಳು ಕಂಡುಬರುತ್ತಿವೆ. ಇದರಿಂದಾಗಿ ವಾಡಿಕೆಯ ಮಳೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಗತ್ಯವಿರುವ ಕಡೆ ಮಳೆ ಬಾರದಿರಬಹುದು ಮತ್ತು ಅಗತ್ಯವಿಲ್ಲದ ಕಡೆ ಅತಿಯಾದ ಮಳೆಯಾಗಬಹುದು. ಇದರ ನೇರ ಪರಿಣಾಮ ಅಂತರ್ಜಲದ ಮೇಲೂ ಆಗುವ ಭೀತಿಯಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ನೀರಿನ ಬಳಕೆಯಲ್ಲಿ ಈಗಿನಿಂದಲೇ ಜಾಗ್ರತೆ ವಹಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ನೀರು ಉಳಿಸಿ… ಭವಿಷ್ಯ ಉಳಿಸಿ!

ದೈನಂದಿನ ಜೀವನದಲ್ಲಿ ನೀರಿನ ಬಳಕೆಯನ್ನು ಮಿತಗೊಳಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಆದ್ದರಿಂದ ಮುಂದಿನ 8 ತಿಂಗಳು ನೀರಿನ ಬಳಕೆಯಲ್ಲಿ ಮಿತವ್ಯಯ ಪಾಲಿಸುವುದು ಅನಿವಾರ್ಯ. ಇದರ ಬಿಸಿ ಕೃಷಿ ಕ್ಷೇತ್ರಕ್ಕೂ ತಗಲುವ ಸಾಧ್ಯತೆಯಿದೆ. ನೀರಿನ ಕೊರತೆಯಿಂದ ಸೊಪ್ಪು, ತರಕಾರಿ ಸೇರಿದಂತೆ ಹಸಿರು ತರಕಾರಿಗಳ ಇಳುವರಿ ಕಡಿಮೆಯಾದರೆ, ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಅಲ್ಲದೆ, ಇಂತಹ ಕಠಿಣ ಸಮಯದಲ್ಲಿ ಆಹಾರ ಪದಾರ್ಥಗಳನ್ನು ಕೃತಕವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆದ್ದರಿಂದ ಸರ್ಕಾರದೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು. ಜೊತೆಗೆ ತಾಪಮಾನ ಏರಿಕೆಯಾಗುವ ದಿನಗಳಲ್ಲಿ ಜನರ ಆರೋಗ್ಯ ಕಾಪಾಡಿಕೊಳ್ಳಲು ವಿಶೇಷ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯವಿದೆ. ಬೇಸಿಗೆಯ ಸಂಕಷ್ಟದ ಕುರಿತಾಗಿ ಕೇಂದ್ರ ಮಟ್ಟದಲ್ಲೂ ಚರ್ಚೆ ನಡೆದಿದೆ. ದೇಶ ಹಾಗೂ ವಿಶ್ವದ ಹವಾಮಾನ ಸ್ಥಿತಿಗತಿ ಆತಂಕಕಾರಿಯಾಗಿದೆ ಎಂದು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿಯ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲು ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿಗಳ ಮೂಲಕ ಜನರಿಗೆ ಬೇಕಾದ ಅಗತ್ಯ ಮಾಹಿತಿಯನ್ನು ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹಂಚಿಕೊಳ್ಳಿ: