ನೀವೆಲ್ಲ ಗಲಾಟೆ ಮಾಡೋಕೆ ಬಂದಿದ್ದೀರಾ? – ಶಿವಲಿಂಗೇಗೌಡರ ಕೋಪ ತಿರುಗಿದ್ದು ಶ್ರೇಯಸ್ ಪಟೇಲ್ ಬೆಂಬಲಿಗರತ್ತ
ಹಾಸನ: ಸಂಸದ ಶ್ರೇಯಸ್ ಪಟೇಲ್ ಅವರ ಬೆಂಬಲಿಗರು ಕಾಂಗ್ರೆಸ್‌ನ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿದ್ದಕ್ಕೆ ಸಚಿವ ಶಿವಲಿಂಗೇಗೌಡ (Shivalinge Gowda) ಅವರು ಗರಂ ಆಗಿದ್ದಾರೆ....

ಹಾಸನ: ಕಾಂಗ್ರೆಸ್ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ಬೆಂಬಲಿಗರು ಗದ್ದಲ ಸೃಷ್ಟಿಸಿದ್ದಕ್ಕೆ ಸಚಿವ ಶಿವಲಿಂಗೇಗೌಡ (Shivalinge Gowda) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗಲಾಟೆ ಮಾಡಲು ಬಂದಿದ್ದೀರಾ? ಇಂತಹ ಘಟನೆಗಳನ್ನು ನಾನು ಸಾಕಷ್ಟು ಕಂಡಿದ್ದೇನೆ, ಸುಮ್ಮನೆ ಕುಳಿತುಕೊಳ್ಳಿ ಎಂದು ಅವರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ನೂತನ ಜಿಲ್ಲಾಧ್ಯಕ್ಷ ಜಿ.ಬಿ.ಶಶಿಧರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಈ ಗೊಂದಲ ಉಂಟಾಗಿದೆ. ವೇದಿಕೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರನ್ನು ಪ್ರಸ್ತಾಪಿಸದ ಕಾರಣಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೇಯಸ್‌ಪಟೇಲ್ ಆಗಮಿಸುವ ತನಕ ಕಾರ್ಯಕ್ರಮವನ್ನು ಉದ್ಘಾಟಿಸಬಾರದೆಂದು ಪಟ್ಟು ಹಿಡಿದ ಕಾರ್ಯಕರ್ತರು ಸಮಾರಂಭಕ್ಕೆ ಅಡ್ಡಿಪಡಿಸಿದ್ದಾರೆ.
ಸಂಸದರ ಬೆಂಬಲಿಗರನ್ನು ಶಾಂತಗೊಳಿಸಲು ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಯತ್ನ ನಡೆಸಿದರು. ನೀವು ಇಲ್ಲಿ ಗಲಾಟೆ ಮಾಡಲು ಬಂದಿದ್ದೀರಾ, ಇಂತಹದ್ದನ್ನೆಲ್ಲಾ ನಾನು ಬಹಳಷ್ಟು ನೋಡಿದ್ದೇನೆ, ಸುಮ್ಮನೆ ಕುಳಿತುಕೊಳ್ಳಿ. ನೀವೇ ಹೋಗಿ ಶ್ರೇಯಸ್ ಪಟೇಲ್ ಅವರನ್ನು ಕರೆದುಕೊಂಡು ಬನ್ನಿ, ನಂತರ ಕಾರ್ಯಕ್ರಮ ಉದ್ಘಾಟನೆ ಮಾಡೋಣ ಎಂದು ಹೇಳಿ ಅವರು ಕುಳಿತರು.
ಕಾರ್ಯಕರ್ತರ ಅಸಮಾಧಾನದ ನಡುವೆಯೇ ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ನಂತರವೂ ಗದ್ದಲ ತೀವ್ರಗೊಂಡಿದ್ದರಿಂದ ಸ್ವಲ್ಪ ಸಮಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.




