ಸೈಟ್ ಕ್ಲೀನಿಂಗ್ ಡ್ರೈವ್: 2 ತಿಂಗಳಲ್ಲಿ 709 ಖಾಲಿ ನಿವೇಶನಗಳ ಸ್ವಚ್ಛತೆ, 372 ಮಾಲೀಕರಿಗೆ ಪಾಲಿಕೆಯಿಂದ ನೋಟಿಸ್..!
ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭಿಸಿರುವ ‘ತ್ಯಾಜ್ಯ ಮುಕ್ತ’ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಳೆದ ಎರಡು ತ...

ಬೆಂಗಳೂರು: ನಗರದ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭಿಸಿರುವ ‘ತ್ಯಾಜ್ಯ ಮುಕ್ತ’ ಅಭಿಯಾನದ ಅಡಿಯಲ್ಲಿ, ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಗುರುತಿಸಲಾಗಿದ್ದ 1,242 ಖಾಲಿ ನಿವೇಶನಗಳ ಪೈಕಿ 709 ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಸಿದೆ.
ವಸತಿ ವಲಯಗಳಲ್ಲಿರುವ ಖಾಲಿ ನಿವೇಶನಗಳು ಕಸದ ತಾಣಗಳಾಗಿ ಪರಿವರ್ತನೆಗೊಳ್ಳುವುದನ್ನು ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳಾಗುವುದನ್ನು ತಡೆಗಟ್ಟುವುದೇ ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಸಂಬಂಧಪಟ್ಟ ನಿವೇಶನಗಳ ಮಾಲೀಕರು ತಮ್ಮ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುವ ನಿವೇಶನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಠಿಣ ನಿಲುವು ತಾಳಿದ್ದು, ಈವರೆಗೆ 372 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ಖಾಲಿ ನಿವೇಶನಗಳಲ್ಲಿ ಕಸ ಮತ್ತು ತ್ಯಾಜ್ಯವನ್ನು ಎಸೆಯುವುದನ್ನು ತಡೆಯಲು ಮಾಲೀಕರು ಸೂಕ್ತ ತಂತಿ ಬೇಲಿಯನ್ನು ಅಳವಡಿಸಬೇಕು ಮತ್ತು ಆ ಜಾಗವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೆ, ನಗರವನ್ನು ಸ್ವಚ್ಛವಾಗಿರಿಸುವ ಪಾಲಿಕೆಯ ಪ್ರಯತ್ನಕ್ಕೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿಭಾಗವಾರು ವಿವರ:
ದಕ್ಷಿಣ: 518 ನಿವೇಶನಗಳ ಪೈಕಿ ಮಾಲೀಕರೇ 305 ನಿವೇಶನಗಳನ್ನು ಹಾಗೂ ಪಾಲಿಕೆ 13 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 200 ನಿವೇಶನಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. 93 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಬೊಮ್ಮನಹಳ್ಳಿ: 498 ನಿವೇಶನಗಳ ಪೈಕಿ ಮಾಲೀಕರು 276 ನಿವೇಶನಗಳನ್ನು ಹಾಗೂ ಪಾಲಿಕೆ ಒಂದು ನಿವೇಶನವನ್ನು ಸ್ವಚ್ಛಗೊಳಿಸಿದೆ. 140 ನಿವೇಶನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಬಿಟಿಎಂ: 111 ನಿವೇಶನಗಳ ಪೈಕಿ ಮಾಲೀಕರು 23 ಹಾಗೂ ಪಾಲಿಕೆ ಐದು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 83 ನಿವೇಶನಗಳ ಪೈಕಿ 62 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಪದ್ಮನಾಭನಗರ: 62 ನಿವೇಶನಗಳ ಪೈಕಿ ಮಾಲೀಕರು 38 ಹಾಗೂ ಪಾಲಿಕೆ 18 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಇನ್ನೂ ಆರು ನಿವೇಶನಗಳನ್ನು ಸ್ವಚ್ಛಗೊಳಿಸಬೇಕಿದೆ. 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಜಯನಗರ: 53 ನಿವೇಶನಗಳ ಪೈಕಿ ಮಾಲೀಕರು 26 ಹಾಗೂ ಪಾಲಿಕೆ ನಾಲ್ಕು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 23 ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 42 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.




