ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು – ತುಂಬಿದ ಸಭೆಯಲ್ಲಿ ಶಾಸಕರ ಮುಂದೆಯೇ ಕಣ್ಣೀರಿಟ್ಟ ಮಹಿಳೆ!
ಚಿಕ್ಕಮಗಳೂರು: ಶೌಚಾಲಯಕ್ಕಾಗಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ತಾ...

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ, ಶೌಚಾಲಯ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳೆಯೊಬ್ಬರು ಭಾವುಕರಾಗಿ ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ, ಶಾಸಕರ ಎದುರೇ ಮಹಿಳೆಯೊಬ್ಬರು ಶೌಚಾಲಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಸದರಿ ಮಹಿಳೆಯನ್ನು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವರೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ಮಹಿಳೆ ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು ಎಂದು ಮರುಉತ್ತರ ನೀಡಿದ್ದಾರೆ. ಆಗ ಅಧಿಕಾರಿಗಳು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದರೆ ಏನಾದರೂ ಮಾಡಲು ಸಾಧ್ಯವಿತ್ತು, ಆದರೆ ನೀವು ಜನರಲ್ ಕೆಟಗರಿಗೆ ಬರುತ್ತೀರಿ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಈ ನಡೆಗೆ ತೀವ್ರ ಬೇಸರಗೊಂಡ ಮಹಿಳೆ, ಶೌಚಾಲಯ ನಿರ್ಮಾಣಕ್ಕೂ ಜಾತಿ ಅಡ್ಡಿಯಾಗುತ್ತದೆಯೇ? ಎಂದು ಸಭೆಯಲ್ಲೇ ಪ್ರಶ್ನಿಸಿ ಗೋಳಾಡಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದರೂ, ಒಂದು ಶೌಚಾಲಯ ನಿರ್ಮಿಸಲು ಅಧಿಕಾರಿಗಳು ನಿಯಮಗಳಲ್ಲಿ ಸ್ವಲ್ಪ ವಿನಾಯಿತಿ ನೀಡಿದರೆ ತಪ್ಪೇನಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ವಾಸ್ತವವಾಗಿ, ಆ ಮಹಿಳೆ ಕಳೆದ ಐದಾರು ವರ್ಷಗಳಿಂದ ಶೌಚಾಲಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.
ಪ್ರತಿ ಬಾರಿಯೂ ಅಧಿಕಾರಿಗಳು ಒಂದಲ್ಲ ಒಂದು ಕಾರಣ ನೀಡಿ ಮಹಿಳೆಯನ್ನು ವಾಪಸ್ ಕಳುಹಿಸುತ್ತಿದ್ದರು. ಆದರೆ, ಶನಿವಾರ ನಡೆದ ಜನ ಸೇವಾ ಕಾರ್ಯಕ್ರಮದಲ್ಲಿ ಮಹಿಳೆಯ ಅಳುವನ್ನು ಗಮನಿಸಿದ ಶಾಸಕ ರಾಜೇಗೌಡ ಅವರು, ತಕ್ಷಣವೇ ಮಹಿಳೆಗೆ ಶೌಚಾಲಯ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ, ಭಾನುವಾರ ತಾಲೂಕು ಮಟ್ಟದ ಕೆಲ ಅಧಿಕಾರಿಗಳು ಚಿಮ್ಮೆ ಗ್ರಾಮಕ್ಕೆ ಭೇಟಿ ನೀಡಿ, ಶೌಚಾಲಯ ನಿರ್ಮಾಣಕ್ಕೆ ಇರುವ ತಾಂತ್ರಿಕ ಅಡೆತಡೆಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.




