ಅರ್ಜುನ್ ಸರ್ಜಾ ಪುತ್ರಿ ಮದುವೆ: ಅಕ್ಟೋಬರ್ 18ಕ್ಕೆ ಅಂಜನಾ ವಿವಾಹ!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಅಕ್ಟೋಬರ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಗಳ 13 ವರ್ಷಗಳ ಪ್ರೀತಿಗೆ ಸರ್ಜಾ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆ.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಸಡಗರದ ವಾತಾವರಣ ಉಂಟಾಗಿದೆ. ಅಕ್ಟೋಬರ್ 18 ರಂದು ಅರ್ಜುನಾ ಸರ್ಜಾ ಅವರ ಎರಡನೇ ಮಗಳು ಅಂಜನಾ ವಿವಾಹವಾಗುತ್ತಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಈ ಶುಭ ಸಮಾರಂಭ ನಡೆಯಲಿದ್ದು, ಸರ್ಜಾ ಕುಟುಂಬದಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ಸಾಗಿವೆ.
ಅಂಜನಾ ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗುತ್ತಿದ್ದಾರೆ. ಆದರೆ ವರನ ಕುರಿತಾಗಿ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಫ್ಯಾಷನ್ ಡಿಸೈನರ್ ಆಗಿರುವ ಅಂಜನಾ, ವಿದೇಶಿ ವ್ಯಕ್ತಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ. 2025ರಲ್ಲಿ ಈ ಜೋಡಿ ಎಂಗೇಜ್ ಆಗಿದೆ. ಅಂಜನಾ ಅರ್ಜುನ್ ಅವರ ಭಾವೀ ಪತಿಯ ಹೆಸರು Isaiah. ಆದರೆ Isaiah ಯಾರು ಮತ್ತು ಅವರ ಹಿನ್ನೆಲೆ ಏನು ಎಂಬ ಬಗ್ಗೆ ಸರ್ಜಾ ಕುಟುಂಬ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. 13 ವರ್ಷಗಳ ನಂತರ ಇವರ ಪ್ರೀತಿಗೆ ಸರ್ಜಾ ಕುಟುಂಬ ಒಪ್ಪಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಈ ಜೋಡಿ 2025ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. Isaiah ಇಟಲಿ ಮೂಲದವರು. ಇಟಲಿಯ ಲೇಕ್ ಕೋಮೋದಲ್ಲಿ ಈ ಜೋಡಿಯ ಎಂಗೇಜ್ಮೆಂಟ್ ನೆರವೇರಿದೆ. ಸೋಷಿಯಲ್ ಮೀಡಿಯಾದಲ್ಲಿ ಅಂಜನಾ ಮತ್ತು ಅವರ ಭಾವಿ ಪತಿಯ ಚಿತ್ರಗಳು ವೈರಲ್ ಆಗುತ್ತಿವೆ. ಪ್ರೇಮಿಗಳ ಫೋಟೋಗಳನ್ನು ನೋಡಿದ ಅಭಿಮಾನಿಗಳು ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಅರ್ಜುನ್ ಸರ್ಜಾ 1988ರಲ್ಲಿ ನಟಿ ನಿವೇದಿತಾ ಅವರನ್ನು ಪ್ರೀತಿಸಿ ವಿವಾಹವಾದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಮಗಳು ಐಶ್ವರ್ಯ ನಟಿಯಾಗಿದ್ದು, 2024ರಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಎರಡನೇ ಮಗಳು ಅಂಜನಾ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಐಶ್ವರ್ಯ ಅವರು ಅರ್ಜುನ್ ಸರ್ಜಾ ಅವರ ವ್ಯವಹಾರ ಮತ್ತು ನಿರ್ಮಾಣ ಸಂಸ್ಥೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಅಂಜನಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ಅಂಜನಾ ಏನು ಮಾಡುತ್ತಿದ್ದಾರೆ?
ಅಂಜನಾ ಅರ್ಜುನ್ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಫ್ಯಾಶನ್ ಮಾರ್ಕೆಟಿಂಗ್ ವ್ಯಾಸಂಗ ಮಾಡಿದ್ದಾರೆ. ಅಂಜನಾ 2023ರಲ್ಲಿ ಹ್ಯಾಂಡ್‌ಬ್ಯಾಗ್ ತಯಾರಿಕಾ ಕಂಪನಿಯನ್ನು ಆರಂಭಿಸಿದ್ದಾರೆ. ವಿಶೇಷವೆಂದರೆ, ಇವರು ಸ್ಥಾಪಿಸಿದ ಕಂಪನಿಯಲ್ಲಿ ಹಣ್ಣಿನ ಸಿಪ್ಪೆಗಳು, ತರಕಾರಿ ಸಿಪ್ಪೆಗಳು ಹಾಗೂ ಲಿನಿನ್‌ನಿಂದ ಬ್ಯಾಗ್‌ಗಳನ್ನು ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಇವರ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ವ್ಯವಹಾರವು ಅತ್ಯುತ್ತಮವಾಗಿ ನಡೆಯುತ್ತಿದೆ.




