ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಧ್ರುವ್ ರಾಠಿ: ವೀಸಾ ನಿಯಮಗಳ ತನಿಖೆಗೆ ಕೇಂದ್ರಕ್ಕೆ ದೂರು ನೀಡಿದ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಭಾಗವಹಿಸಿದ್ದರ ವಿರುದ್ಧ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ.

· 1 ನಿಮಿಷ ಓದು· ಬೆಂಗಳೂರು ನಗರ
ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರತಿಭಟನೆಯಲ್ಲಿ ಧ್ರುವ್‌ ರಾಠಿ ಭಾಗಿ: ಗೃಹ ಸಚಿವಾಲಯದ ಬಾಗಿಲು ತಟ್ಟಿದ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ
ಹಂಚಿಕೊಳ್ಳಿ:

ಬೆಂಗಳೂರು (ಅ.9): ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ 'ವಿಶೇಷ ತೀವ್ರ ಪರಿಷ್ಕರಣೆ' (SIR) ವಿರೋಧಿ ಪ್ರತಿಭಟನಾ ಸಭೆಯಲ್ಲಿ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಪಾಲ್ಗೊಂಡು ಭಾಷಣ ಮಾಡಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಧ್ರುವ್ ರಾಠಿ ಅವರ ವೀಸಾ ನಿಯಮಗಳ ಪಾಲನೆ, ಇಮಿಗ್ರೇಷನ್ ಸ್ಥಿತಿ ಹಾಗೂ ಪೌರತ್ವದ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ, ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎಂದು ಹೇಳಲಾಗಿದ್ದು, ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ-ಹೋರಾಟಗಾರ ಪ್ರಕಾಶ್ ರಾಜ್ ಮತ್ತು ಇತರರೊಂದಿಗೆ ಸೇರಿ ಭಾರತೀಯ ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಿರ್ಧಾರವನ್ನು ಅವರು ಟೀಕಿಸಿದ್ದರು ಎಂದು ಭಾಸ್ಕರ್ ರಾವ್ ಉಲ್ಲೇಖಿಸಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ರಾವ್, ಈ ಪತ್ರವನ್ನು ತಮ್ಮ 'ಎಕ್ಸ್' (X) ಖಾತೆಯ ಮೂಲಕವೂ ಹಂಚಿಕೊಂಡಿದ್ದಾರೆ.

ಭಾಸ್ಕರ್ ರಾವ್ ಪತ್ರದಲ್ಲಿ ಏನಿದೆ?

"ನಿರ್ದಿಷ್ಟ ವೀಸಾ, ಇಮಿಗ್ರೇಷನ್ ಅನುಮತಿ ಅಥವಾ ನಿಗದಿತ ಅರ್ಹತೆಯ ಆಧಾರದ ಮೇಲೆ ಭಾರತದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಯೊಬ್ಬರು, ಭಾರತದ ಶಾಸನಬದ್ಧ ಮತ್ತು ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯ ವಿರುದ್ಧ ನಡೆಯುವ ಸಂಘಟಿತ ರಾಜಕೀಯ ಪ್ರತಿಭಟನೆಯಲ್ಲಿ ಕಾನೂನುಬದ್ಧವಾಗಿ ಭಾಗವಹಿಸಲು, ತೊಡಗಿಸಿಕೊಳ್ಳಲು ಅಥವಾ ಭಾಷಣ ಮಾಡಲು ಅವಕಾಶವಿದೆಯೇ ಎಂಬ ಪ್ರಮುಖ ಅಂಶವು ತನಿಖೆಗೆ ಒಳಪಡಬೇಕಾಗಿದೆ" ಎಂದು ರಾವ್ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ಈ ಕೆಳಗಿನ ಅಂಶಗಳನ್ನು ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ:

ಪೌರತ್ವ ಮತ್ತು ಪಾಸ್‌ಪೋರ್ಟ್: ಧ್ರುವ್ ರಾಠಿ ಅವರ ಪ್ರಸ್ತುತ ಪೌರತ್ವ/ರಾಷ್ಟ್ರೀಯತೆ ಹಾಗೂ ಅವರು ಭಾರತಕ್ಕೆ ಪ್ರವೇಶಿಸಲು ಬಳಸಿದ ಪಾಸ್‌ಪೋರ್ಟ್ ವಿವರಗಳು.

ವೀಸಾ ಪ್ರಕಾರ: ಯಾವ ವರ್ಗದ ವೀಸಾ ಅಥವಾ ಅನುಮತಿಯ ಅಡಿಯಲ್ಲಿ ಅವರು ಭಾರತದಲ್ಲಿ ನೆಲೆಸಿದ್ದಾರೆ ಮತ್ತು ಅವರ ಭೇಟಿಯ ಸಂದರ್ಭದಲ್ಲಿ ಘೋಷಿಸಲಾದ ಉದ್ದೇಶಗಳೇನು?

ಪೂರ್ವ ಅನುಮತಿ: ಇಂತಹ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಲು ಚಾಲ್ತಿಯಲ್ಲಿರುವ ವೀಸಾ ಮತ್ತು ಇಮಿಗ್ರೇಷನ್ ನಿಯಮಗಳ ಅಡಿಯಲ್ಲಿ ಅವರಿಗೆ ಅವಕಾಶವಿದೆಯೇ ಮತ್ತು ಅದಕ್ಕೆ ಪೂರ್ವ ಅನುಮತಿಯ ಅಗತ್ಯವಿತ್ತೇ?

ಒಂದು ವೇಳೆ ಧ್ರುವ್ ರಾಠಿ ಅವರು 'ವಿದೇಶಿಯರ ಕಾಯ್ದೆ 1946' (Foreigners Act, 1946), ವೀಸಾ ಷರತ್ತುಗಳು, 'ಒಸಿಐ' (OCI) ನಿಯಮಗಳು, ಇಮಿಗ್ರೇಷನ್ ನಿಯಮಗಳು ಅಥವಾ ಭಾರತದ ಇತರ ಕಾನೂನುಗಳನ್ನು ಉಲ್ಲಂಘಿಸಿರುವುದು ಸಾಬೀತಾದರೆ, ಅವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾವ್ ಒತ್ತಾಯಿಸಿದ್ದಾರೆ.

ದ್ವೇಷದ ರಾಜಕೀಯವಲ್ಲ, ಕಾನೂನಿನ ಪಾಲನೆ ಅಷ್ಟೇ

ತಮ್ಮ ಮನವಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿರುವ ಭಾಸ್ಕರ್ ರಾವ್, "ನನ್ನ ಈ ಮನವಿಯು ಧ್ರುವ್ ರಾಠಿ ಅವರ ರಾಜಕೀಯ ನಿಲುವುಗಳು, ಚುನಾವಣಾ ಆಯೋಗ ಅಥವಾ ಸರ್ಕಾರದ ಮೇಲಿನ ಅವರ ಟೀಕೆಗಳ ಬಗೆಗಿನ ಭಿನ್ನಾಭಿಪ್ರಾಯದಿಂದ ಪ್ರೇರಿತವಾದುದಲ್ಲ. ಭಾರತದಲ್ಲಿರುವ ವಿದೇಶಿ ಪ್ರಜೆಗಳು ಇಲ್ಲಿನ ಕಾನೂನು ಚೌಕಟ್ಟನ್ನು ಹಾಗೂ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನನ್ನ ಉದ್ದೇಶ" ಎಂದು ತಿಳಿಸಿದ್ದಾರೆ. ಜೊತೆಗೆ, ನಿಷ್ಪಕ್ಷಪಾತ ತನಿಖೆಗೆ ಸಹಕಾರಿಯಾಗುವಂತೆ ರಾಠಿ ಅವರ ಎಂಟ್ರಿ-ಎಕ್ಸಿಟ್ ಹಾಗೂ ಇಮಿಗ್ರೇಷನ್ ದಾಖಲೆಗಳನ್ನು ಸುರಕ್ಷಿತವಾಗಿರಿಸಿ ಪರಿಶೀಲಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಗರಿಕ ಸಮಾಜದ ಸಂಘಟನೆಗಳು ಹಾಗೂ 'ಸಿಜೆಪಿ' (CJP) ಆಯೋಜಿಸಿದ್ದ 'ಪೀಪಲ್ಸ್ ಟ್ರಿಬ್ಯೂನಲ್' ಪ್ರತಿಭಟನೆಯಲ್ಲಿ ಧ್ರುವ್ ರಾಠಿ ಭಾಗವಹಿಸಿದ್ದರು. ಚುನಾವಣಾ ಆಯೋಗದ 'ಎಸ್‌ಐಆರ್' (SIR) ಪ್ರಕ್ರಿಯೆ ವಿರುದ್ಧ ನಡೆದ ಈ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭೀಜಿತ್ ದಿಪ್ಕೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಹಂಚಿಕೊಳ್ಳಿ: