ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರಕ್ಕೆ ಕತ್ತರಿ: ಪ್ರಾಸಿಕ್ಯೂಷನ್ ಮಿತಿ ₹5 ಕೋಟಿಗೆ ಹೆಚ್ಚಳ, ತೆರಿಗೆದಾರರಿಗೆ ಸಿಕ್ತು ರಿಲೀಫ್!

57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರವನ್ನು ರದ್ದುಗೊಳಿಸಲಾಗಿದೆ ಮತ್ತು ಕ್ರಿಮಿನಲ್ ಪ್ರಾಸಿಕ್ಯೂಷನ್ ಮಿತಿಯನ್ನು 5 ಕೋಟಿ ರೂ.ಗೆ ಏರಿಸಲಾಗಿದೆ. ದಂಡದ ಮೊತ್ತವನ್ನು ಕಡಿತಗೊಳಿಸಿದ್ದು, ಸ...

· 1 ನಿಮಿಷ ಓದು
ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರ ರದ್ದು: ಪ್ರಾಸಿಕ್ಯೂಷನ್ ಮಿತಿ ₹5 ಕೋಟಿಗೆ ಏರಿಕೆ, ತೆರಿಗೆದಾರರಿಗೆ ರಿಲೀಫ್!
ಹಂಚಿಕೊಳ್ಳಿ:

ನವದೆಹಲಿ (ಅ.09): ಜಿಎಸ್‌ಟಿ ಅಧಿಕಾರಿಗಳಿಗೆ ನೀಡಲಾಗಿದ್ದ ಬಂಧನದ ಅಧಿಕಾರವನ್ನು ಸಂಪೂರ್ಣವಾಗಿ ತೆಗೆದುಹಾಕಲು ಹಾಗೂ ಕ್ರಿಮಿನಲ್ ಪ್ರಾಸಿಕ್ಯೂಷನ್ (ಅಭಿಯೋಜನೆ) ಕ್ರಮಕ್ಕೆ ಜಾರಿಯಲ್ಲಿದ್ದ ಕನಿಷ್ಠ ಮಿತಿಯನ್ನು 1 ಕೋಟಿ ರು.ನಿಂದ 5 ಕೋಟಿ ರು.ಗೆ ಹೆಚ್ಚಿಸಲು ಜಿಎಸ್‌ಟಿ ಮಂಡಳಿಯು ಗುರುವಾರ ನಡೆದ ತನ್ನ 57ನೇ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ದೈನಂದಿನ ತೆರಿಗೆ ಆಡಳಿತವು ಸರಳವಾಗಿರಬೇಕು ಮತ್ತು ತೆರಿಗೆದಾರರ ಮೇಲಿನ ನಂಬಿಕೆಯ ಆಧಾರದಲ್ಲಿ ನಡೆಯಬೇಕು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸರ್ಕಾರವು ಉದ್ಯಮಿಗಳನ್ನು ಹಾಗೂ ತೆರಿಗೆದಾರರನ್ನು ನಂಬಬೇಕು. ಅವರ ನಡುವಿನ ವಹಿವಾಟುಗಳಲ್ಲಿ ಅನಗತ್ಯವಾದ ಸರ್ಕಾರಿ ಹಸ್ತಕ್ಷೇಪ ಹಾಗೂ ತನಿಖೆಯ ಹೆಸರಿನ ಕಿರುಕುಳ ಇರಬಾರದು’ ಎಂದು ಸ್ಪಷ್ಟಪಡಿಸಿದರು.

ದಂಡ ಮತ್ತು ಶಿಕ್ಷೆ ನಿಯಮ ಸಡಿಲಿಕೆ

ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರವನ್ನು ಹಿಂಪಡೆಯುವುದರ ಜೊತೆಗೆ, ಕನಿಷ್ಠ ಶಿಕ್ಷೆಯ ನಿಯಮವನ್ನು ರದ್ದುಗೊಳಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲಿಯೂ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಸಂಪೂರ್ಣ ಅಧಿಕಾರವನ್ನು ನ್ಯಾಯಾಂಗದ ವಿವೇಚನೆಗೆ ಬಿಟ್ಟುಕೊಡಲಾಗಿದೆ.

ಯಾವುದೇ ನಿರ್ದಿಷ್ಟ ದಂಡದ ಉಲ್ಲೇಖವಿಲ್ಲದ ಪ್ರಕರಣಗಳಲ್ಲಿ ವಿಧಿಸಲಾಗುತ್ತಿದ್ದ ಸಾಮಾನ್ಯ ದಂಡದ ಮೊತ್ತವನ್ನು 25,000 ರು.ನಿಂದ 10,000 ರು.ಗೆ ಇಳಿಸಲಾಗಿದೆ. ಅಲ್ಲದೆ, 10,000 ರು.ಗಿಂತ ಕಡಿಮೆ ಮೊತ್ತದ ತೆರಿಗೆ ವ್ಯತ್ಯಾಸ ಅಥವಾ ಬಾಕಿ ಇರುವ ಪ್ರಕರಣಗಳಲ್ಲಿ ತೆರಿಗೆದಾರರಿಗೆ ಯಾವುದೇ ನೋಟಿಸ್ ನೀಡದಿರಲು ಮಂಡಳಿ ತೀರ್ಮಾನಿಸಿದೆ. ಈ ಎಲ್ಲಾ ಹೊಸ ಶಿಫಾರಸುಗಳು 2027ರ ಏ.1ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.

ಬಾಕಿ ಪಾವತಿಗೆ ಸ್ಪಷ್ಟ ನಿಯಮ

ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ವಿಳಂಬ ಮಾಡುವ, ಸಣ್ಣಪುಟ್ಟ ತಪ್ಪುಗಳನ್ನು ಮಾಡುವ ಅಥವಾ ತೆರಿಗೆ ಪಾವತಿಯಲ್ಲಿ ಹಿಂದುಳಿಯುವ ತೆರಿಗೆದಾರರಿಗೆ ಈ ಸಭೆಯಲ್ಲಿ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ. ಇಂತಹ ಪ್ರಕರಣಗಳಲ್ಲಿ ನಿಯಮದ ಪ್ರಕಾರ ಬರಬೇಕಾದ ತೆರಿಗೆ ಮೊತ್ತ, ನಿಗದಿತ ಬಡ್ಡಿ ಹಾಗೂ ಅದಕ್ಕೆ ತಕ್ಕ ದಂಡವನ್ನು ಮಾತ್ರ ವಸೂಲಿ ಮಾಡಲಾಗುವುದು. ಅದನ್ನು ಹೊರತುಪಡಿಸಿ ಉದ್ಯಮಿಗಳ ಮೇಲೆ ಯಾವುದೇ ಹೆಚ್ಚುವರಿ ಅಥವಾ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಇನ್‌ಪುಟ್ ಸೇವೆ ಮರುಪಾವತಿ ವಿಸ್ತರಣೆ

‘ಇನ್ವರ್ಟೆಡ್ ರೇಟ್ ಸ್ಟ್ರಕ್ಚರ್’ (ಅಂದರೆ ಸಿದ್ಧ ಉಡುಪು ಅಥವಾ ಉತ್ಪನ್ನಕ್ಕಿಂತ ಅದರ ಕಚ್ಚಾವಸ್ತುವಿನ ಮೇಲಿನ ತೆರಿಗೆ ಹೆಚ್ಚಿದ್ದಾಗ ಉಂಟಾಗುವ ಸಮಸ್ಯೆ) ಅಡಿಯಲ್ಲಿ ಸಿಗುವ ರಿಫಂಡ್ ಸೌಲಭ್ಯವನ್ನು ಇನ್‌ಪುಟ್ ಸೇವೆಗಳಿಗೂ ವಿಸ್ತರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದೇ ನ.1ರಿಂದ ಅಥವಾ ತದನಂತರ ಪಡೆದುಕೊಂಡ ತೆರಿಗೆ ಕ್ರೆಡಿಟ್‌ಗಳಿಗೆ ಈ ಸೌಲಭ್ಯ ದೊರೆಯಲಿದೆ.

ಐಟಿಸಿ ಸಮಿತಿ ರಚನೆ

ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನೋಂದಣಿಯಾಗಿರುವ ಸಿಜಿಎಸ್‌ಟಿ ತೆರಿಗೆದಾರರಿಗೆ ಅನುಕೂಲವಾಗುವಂತೆ ‘ಫೇಸ್‌ಲೆಸ್ ಟ್ಯಾಕ್ಸ್ ಅಸೆಸ್‌ಮೆಂಟ್’ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ. ಇನ್ನೊಂದೆಡೆ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ, ಸರಿಯಾದ ಇನ್‌ವಾಯ್ಸ್ ಹೊಂದಿದ್ದು, ಸರಕುಗಳನ್ನು ಪಡೆದು, ಪೂರೈಕೆದಾರರಿಗೆ ಸಂಪೂರ್ಣ ಹಣ ಪಾವತಿಸಿರುವ ಪ್ರಾಮಾಣಿಕ ಖರೀದಿಗಾರರ ಹಿತರಕ್ಷಣೆಗೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು 3 ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ಮುಂದಿನ ಸಭೆಯಲ್ಲಿ ವರದಿ ಸಲ್ಲಿಸಲಿದೆ.

ನಮ್ಮ ಗುರಿ ಸ್ಪಷ್ಟ

ಜಿಎಸ್‌ಟಿ ಸುಧಾರಣಾ ನಿರ್ಧಾರ ಸ್ವಾಗತಾರ್ಹ. ಬಂಧನ ನಿಬಂಧನೆಗಳನ್ನು ತೆಗೆದುಹಾಕುವುದು, ಹೆಚ್ಚಿನ ಅಪರಾಧ ಮುಕ್ತಗೊಳಿಸುವಿಕೆ ಮತ್ತು ಸರಳ ಕಾರ್ಯವಿಧಾನಗಳ ಕುರಿತು ಮಂಡಳಿಯ ಶಿಫಾರಸುಗಳು ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತವೆ. ನಮ್ಮ ಗಮನ ಸ್ಪಷ್ಟವಾಗಿದೆ. ವೇಗದ ನಿರ್ಧಾರಗಳು, ಕಡಿಮೆ ಅನುಸರಣೆ ವೆಚ್ಚಗಳು, ಸ್ವಯಂಚಾಲಿತ ಮರುಪಾವತಿ- ಇವು ಜಿಎಸ್‌ಟಿಯನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿಯಾಗಿ ಮಾಡುವ ನಮ್ಮ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿವೆ.

ಹಂಚಿಕೊಳ್ಳಿ: