ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ. ಬಿಡುಗಡೆ!
ಮಡಿಕೇರಿ: ನಾಡಿನ ಜೀವನದಿ ತಲಕಾವೇರಿಯಲ್ಲಿ (Talacauvery) ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ (Theerthodbhava) ಇನ್ನೇನು ಕೇವಲ 15 ದಿನಗಳಷ್ಟೇ ಬಾಕಿ ಉಳಿದಿದೆ. ಇದೀಗ ಭಾಗಮಂಡಲ-ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್...

ಮಡಿಕೇರಿ: ರಾಜ್ಯದ ಜೀವನಾಡಿಯಾಗಿರುವ ತಲಕಾವೇರಿಯಲ್ಲಿ (Talacauvery) ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ (Theerthodbhava) ಇನ್ನೇನು 15 ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರಸ್ತುತ ಭಾಗಮಂಡಲ-ತಲಕಾವೇರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ಅವಶ್ಯಕ ಕೆಲಸಗಳಿಗಾಗಿ ಕಾವೇರಿ ನೀರಾವರಿ ನಿಗಮದ (CNNL) ಮೂಲಕ 2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
2 ಕೋಟಿ ರೂ. ಅನುದಾನವು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆಯಾಗಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ತಿಳಿಸಿದ್ದಾರೆ. ತುಲಾ ಸಂಕ್ರಮಣ ಜಾತ್ರೋತ್ಸವದ ಅಂಗವಾಗಿ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಈ ಹಣವನ್ನು ನೀಡಲಾಗಿದೆ. ಕಳೆದ ವರ್ಷವೂ ಕೂಡ ನಿಗಮದಿಂದ 2 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇದರ ಜೊತೆಗೆ, ಜಾತ್ರೋತ್ಸವದ ಸಿದ್ಧತೆ ಮತ್ತು ಇತರೆ ಕಾರ್ಯಗಳಿಗಾಗಿ ಸರ್ಕಾರದಿಂದ ಪ್ರತ್ಯೇಕವಾಗಿ 75 ಲಕ್ಷ ರೂ. ಅನುದಾನವನ್ನು ಒದಗಿಸಲಾಗುತ್ತಿದೆ. ಇದನ್ನೂ ಓದಿ: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ 1 ಕೋಟಿ ರೂ. ಘೋಷಣೆ
ಈ ಬಾರಿಯೂ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದ್ದಾರೆ. ತಲಕಾವೇರಿ ತೀರ್ಥೋದ್ಭವದ ಕೆಲಸಗಳು ಈಗಾಗಲೇ ಆರಂಭಗೊಂಡಿವೆ. ಸೆಪ್ಟೆಂಬರ್ 17 ರಂದು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ತುಲಾ ಸಂಕ್ರಮಣದ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಗಿದೆ. ಅ.5ರಂದು ಬೆಳಗ್ಗೆ 10:30ಕ್ಕೆ ಆಜ್ಞಾ ಮುಹೂರ್ತ, ಅ.15ರಂದು ಅಕ್ಷಯ ಪಾತ್ರ ಹಾಗೂ ಕಾಣಿಕೆ ಡಬ್ಬಿಗಳನ್ನು ಇಡುವ ಕಾರ್ಯದೊಂದಿಗೆ, ಈ ಬಾರಿ ಅ.17 ರಂದು ರಾತ್ರಿ 7:50ಕ್ಕೆ ಸಲ್ಲುವ ಮೇಷಲಗ್ನದಲ್ಲಿ ಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವ ಜರುಗಲಿದೆ. ಇದನ್ನೂ ಓದಿ: ರಾಮ ಮಂದಿರದಲ್ಲಿ `ಮಿಲಿಟರಿ ಮಾದರಿ’ ಶಿಸ್ತು – ಆಡಳಿತದಲ್ಲಿ ಮಹತ್ವದ ಬದಲಾವಣೆ
ಪ್ರಸ್ತುತ ಭಾಗಮಂಡಲ-ತಲಕಾವೇರಿ ವ್ಯಾಪ್ತಿಯಲ್ಲಿ ದೇವಾಲಯದ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವ ಹಾಗೂ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ ಹೂಳು ತೆಗೆಯುವಿಕೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಹಾಕಿ ದಿಗ್ಗಜ ಪರ್ಗತ್ ಸಿಂಗ್ ನೇಮಕ




