ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಮಾನಸಿಕ ಆರೋಗ್ಯ: ಮನದ ಮಾತುಗಳಿಗೆ ಕಿವಿಗೊಡುವುದು ಅನಿವಾರ್ಯ!

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅ.10ರಂದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು... The post ಮಾನಸಿಕ ಆರೋಗ್ಯ: ಆಂತರಿಕ ಧ್ವನಿಗಳಿಗೆ ಆದ್ಯತೆ ಅ...

· ಉಡುಪಿ
ಮಾನಸಿಕ ಆರೋಗ್ಯ: ಆಂತರಿಕ ಧ್ವನಿಗಳಿಗೆ ಆದ್ಯತೆ ಅಗತ್ಯ
ಹಂಚಿಕೊಳ್ಳಿ:

ಉಡುಪಿ: ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಮಾಹಿತಿ ನೀಡಿದರು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ದಿನಾಚರಣೆಯು ‘ಅಲಿಸಲ್ಪಟ್ಟ ಜೀವನದ ಅನುಭವಗಳು: ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಘೋಷವಾಕ್ಯದಡಿ ನಡೆಯಲಿದೆ ಎಂದು ತಿಳಿಸಿದರು. ಪ್ರಸ್ತುತ ಒತ್ತಡದಿಂದ ಕೂಡಿದ ಜೀವನಶೈಲಿಯು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. 10ರಿಂದ 19 ವರ್ಷ ವಯಸ್ಸಿನ ಪ್ರತಿ ಏಳು ಮಂದಿಯಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಲ್ಲದೆ 60 ವರ್ಷ ಮೇಲ್ಪಟ್ಟವರಲ್ಲಿಯೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ. ಸಾಮಾಜಿಕ ಪ್ರತ್ಯೇಕತೆ ಹಾಗೂ ಒಂಟಿತನವು ಇದಕ್ಕೆ ಪ್ರಮುಖ ಅಪಾಯಕಾರಿ ಕಾರಣಗಳಾಗಿವೆ ಎಂದು ಅವರು ವಿವರಿಸಿದರು.

ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರು ತಮ್ಮ ಮಾನಸಿಕ ಆರೋಗ್ಯದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುವುದು ಈ ವಿಷಯದ ಕುರಿತು ಅರಿವು ಮೂಡಿಸಲು ನೆರವಾಗುತ್ತಿದೆ. ಇಂತಹ ಮುಕ್ತ ಚರ್ಚೆಗಳು ಮಾನಸಿಕ ಅನಾರೋಗ್ಯದ ಕುರಿತಾದ ತಾರತಮ್ಯ ಮತ್ತು ಕಳಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದ ‘ಮಾನಸಧಾರ’ ಯೋಜನೆಯ ಮೂಲಕ ಆಸ್ಪತ್ರೆಯ ‘ಬಂಧು’ ಡೇ-ಕೇರ್ ಸೆಂಟರ್‌ಗೆ ಚೇತರಿಕೆಯ ಹಂತದಲ್ಲಿ ಬರುವವರಿಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಸಲಕರಣೆ ಹಾಗೂ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇದು ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುತ್ತಿದೆ ಎಂದು ಅವರು ಹೇಳಿದರು.

‘ಪರಿವರ್ತನ’, ‘ಅಭಯ’, ‘ಬಂಧು’ ಡೇ-ಕೇರ್ ಸೆಂಟರ್ ಹಾಗೂ ‘ಹೊಂಬೆಳಕು’ ನಿವಾಸಿಗಳಿಗಾಗಿ ಚಿತ್ರಕಲಾ ಮತ್ತು ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವರು ಸಿದ್ಧಪಡಿಸಿದ ಸೃಜನಾತ್ಮಕ ಕರಕುಶಲ ವಸ್ತುಗಳು ಹಾಗೂ ಚಿತ್ರಕಲೆಗಳ ಪ್ರದರ್ಶನವನ್ನು ಅ.10 ರಂದು ಉದ್ಘಾಟಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಗುಣಮುಖರಾಗಿ ಉತ್ತಮ ಜೀವನ ನಡೆಸುತ್ತಿರುವವರು ಹಾಗೂ ಅವರ ಆರೈಕೆದಾರರಿಗೆ ಸನ್ಮಾನ ನೆರವೇರಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಲಿದ್ದು, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಜಾಗತಿಕ ಅಭಿಯಾನಗಳ (ಮಾನಸಿಕ ಆರೋಗ್ಯ) ಮುಖ್ಯ ಸಂಯೋಜಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಹೆರಾಲ್ಡ್ ಸೋನ್ಸ್ ಮತ್ತು ಕಾರ್ಯಕ್ರಮ ಸಂಯೋಜಕ ಡಾ. ಹೆಚ್. ಗಣೇಶ್ ಪೈ ಭಾಗವಹಿಸಲಿದ್ದಾರೆ. ಡಾ. ಪಿ.ವಿ. ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲೆ 317Cಯ ನೂತನ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಡಾ. ಹೆಚ್. ಗಣೇಶ್ ಪೈ, ಡಾ.ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ರವಿರಾಜ್ ನಾಯಕ್ ಹಾಗೂ ಡಾ. ಶಕೀಲಾ ಉಪಸ್ಥಿತರಿದ್ದರು.

ಹಂಚಿಕೊಳ್ಳಿ: