ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ಕಪಾಳಮೋಕ್ಷ ಪ್ರಕರಣ ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿ ಜಾಮೀನು ಅರ್ಜಿ ವಜಾ ಐಶ್ವರ್ಯ ಬಂಧನಕ್ಕಾಗಿ ತೀವ್ರ ಶೋಧ

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಕೋರ್ಟ್ ಶಾಕ್ ನೀಡಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಹೌದು.. ತುಮಕೂರು...

ಸಂಪಾದಕ· 1 ನಿಮಿಷ ಓದು· ಮಂಡ್ಯ
ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ಕಪಾಳಮೋಕ್ಷ ಪ್ರಕರಣ  ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿ ಜಾಮೀನು ಅರ್ಜಿ ವಜಾ  ಐಶ್ವರ್ಯ ಬಂಧನಕ್ಕಾಗಿ ತೀವ್ರ ಶೋಧ
ಹಂಚಿಕೊಳ್ಳಿ:

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಕೋರ್ಟ್ ಶಾಕ್ ನೀಡಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಹೌದು.. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಎಸ್. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಾ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಐಶ್ವರ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶ್ರೀರಂಗಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಅರ್ಜಿ ವಜಾಗೊಂಡ ಬೆನ್ನಲ್ಲೇ ಪೊಲೀಸರು ಐಶ್ವರ್ಯ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸವಿತಾ ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಗಾಯಗೊಳಿಸುವುದು, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ಐಶ್ವರ್ಯಾ ಕೂಡ ಪೊಲೀಸ್‌ ಅಧಿಕಾರಿಯ ವಿರುದ್ಧ ಪ್ರತಿದೂರು ನೀಡಿದ್ದಾರೆ. ಪೊಲೀಸ್‌ ಅಧಿಕಾರಿಯೇ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಎರಡೂ ದೂರುಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಮಂಡ್ಯ ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ? ಆಗಸ್ಟ್ 12ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರತಿ ಉಕ್ಕಡದ ಮಾರಮ್ಮ ದೇವಾಲಯದಲ್ಲಿ ಭೀಮ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರ ಭಾರಿ ದಟ್ಟಣೆ ಇತ್ತು. ಜನಸಂದಣಿ ನಿಯಂತ್ರಣಕ್ಕಾಗಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಸವಿತಾ ಬಿ. ಪಾಟೀಲ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದರ್ಶನಕ್ಕಾಗಿ ಬಂದಿದ್ದ ಐಶ್ವರ್ಯಾ ಅವರು ಸರತಿ ಸಾಲಿನಲ್ಲಿ ಕಾಯದೆ ದೇವಾಲಯದ ಗರ್ಭಗುಡಿಗೆ ತೆರಳಲು ಮುಂದಾದಾಗ ಸವಿತಾ ಅವರು ತಡೆದಿದ್ದರು ಎನ್ನಲಾಗಿದೆ.

ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಐಶ್ವರ್ಯಾ ಅವರು ಪೊಲೀಸ್‌ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ವಿಡಿಯೋದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದ ಬಳಿಕ ಐಶ್ವರ್ಯಾ ಅವರು ಪೊಲೀಸ್‌ ಅಧಿಕಾರಿಗೆ ಹೊಡೆಯುತ್ತಿರುವುದು ಹಾಗೂ ಬಳಿಕ ಸವಿತಾ ಅವರು ಪ್ರತಿಕ್ರಿಯಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಶಾಸಕ ಸುರೇಶ್‌ಗೌಡ ಕ್ಷಮೆಯಾಚನೆ ಘಟನೆ ವಿವಾದಕ್ಕೆ ಕಾರಣವಾದ ಬಳಿಕ ಶಾಸಕ ಸುರೇಶ್‌ಗೌಡ ಅವರು ತಮ್ಮ ಪುತ್ರಿಯ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ದೇವಾಲಯಗಳು ಶಾಂತಿಯ ಸ್ಥಳವಾಗಿದ್ದು, ಅಲ್ಲಿ ಯಾವುದೇ ರೀತಿಯ ಅಹಿತಕರ ವರ್ತನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ತಮ್ಮ ಪುತ್ರಿ ತಪ್ಪು ಮಾಡಿದ್ದರೆ ಅದಕ್ಕಾಗಿ ಕ್ಷಮೆ ಕೋರುವುದಾಗಿ ಹೇಳಿದ್ದ ಅವರು, ಘಟನೆಗೂ ಮುನ್ನ ಪೊಲೀಸ್‌ ಅಧಿಕಾರಿಯಿಂದಲೂ ತಮ್ಮ ಪುತ್ರಿಗೆ ಅನುಚಿತ ವರ್ತನೆ ನಡೆದಿದೆ ಎಂದು ಆರೋಪಿಸಿದ್ದರು.

ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಮುಂದಿನ ಕಾನೂನು ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

ಹಂಚಿಕೊಳ್ಳಿ: