ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಸಿಗುತ್ತಿದೆ ಉಚಿತ ಆರೈಕೆ!

ಮಾರಣಾಂತಿಕ ಕಾಯಿಲೆಯ ಅಂತಿಮ ಹಂತದಲ್ಲಿರುವವರಿಗೆ ನೋವುರಹಿತ, ಗೌರವಯುತ ಬದುಕಿಗೆ ಸೇವೆ: ಡಾ.ಎಚ್.ಎಸ್ ಬಲ್ಲಾಳ್ ಉಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ... The post ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋ...

· 3 ನಿಮಿಷ ಓದು· ಉಡುಪಿ
ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಉಚಿತ ಆರೈಕೆ
ಹಂಚಿಕೊಳ್ಳಿ:

ಮಾರಣಾಂತಿಕ ಕಾಯಿಲೆಗಳ ಅಂತಿಮ ಘಟ್ಟದಲ್ಲಿರುವ ರೋಗಿಗಳಿಗೆ ನೋವುರಹಿತ ಹಾಗೂ ಘನತೆಯ ಜೀವನ ನಡೆಸಲು ಸಹಕಾರ: ಡಾ. ಎಚ್.ಎಸ್. ಬಲ್ಲಾಳ್

ಉಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು ಜೀವನದ ಕೊನೆಯ ದಿನಗಳಲ್ಲಿ ಯಾವುದೇ ನೋವಿಲ್ಲದೆ ಗೌರವಯುತವಾಗಿ ಬದುಕಲು ಮಾಹೆ ವಿಶ್ವವಿದ್ಯಾಲಯದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ಅತ್ಯುತ್ತಮ ಉಪಶಾಮಕ ಆರೈಕೆ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ 700ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ ಮತ್ತು 1,300ಕ್ಕೂ ಹೆಚ್ಚಿನ ರೋಗಿಗಳ ಕುಟುಂಬದ ಆರೈಕೆದಾರರಿಗೆ ಅಗತ್ಯವಾದ ಬೆಂಬಲವನ್ನು ನೀಡಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಅಧ್ಯಕ್ಷ ಮತ್ತು ಮಾಹೆ ಟ್ರಸ್ಟ್ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರ ದೂರದೃಷ್ಟಿಯಿಂದ ಎಂಎಚ್‌ಆರ್‌ಸಿ ಅಸ್ತಿತ್ವಕ್ಕೆ ಬಂದಿದೆ. ಹಾವಂಜೆ ಬಳಿ 12 ಎಕರೆ ಪ್ರದೇಶದಲ್ಲಿ ಆರಂಭವಾದ ಈ ಕೇಂದ್ರವು ಮೊದಲು 35 ಹಾಸಿಗೆಗಳನ್ನು ಹೊಂದಿತ್ತು, ಇದೀಗ ಆ ಸಂಖ್ಯೆಯನ್ನು 105 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ. ಈ ಕೇಂದ್ರದ ನಿರ್ವಹಣೆಗಾಗಿ ಪ್ರತಿ ವರ್ಷ ₹6 ಕೋಟಿಗೂ ಅಧಿಕ ಹಣ ಖರ್ಚಾಗುತ್ತಿದ್ದು, ದಾನಿಗಳ ಸಹಕಾರದೊಂದಿಗೆ ಈ ಸೇವೆ ಮುಂದುವರಿಯುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಶಿಫಾರಸಿನ ಮೇರೆಗೆ ರೋಗಿಗಳಿಗೆ ಇಲ್ಲಿ ಆರೈಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ದೇಶದ ಅತಿದೊಡ್ಡ ಹಾಸ್ಪಿಸ್ ಮತ್ತು ರೆಸ್ಟೈಟ್ ಸೆಂಟರ್‌ಗಳಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಚಿಕಿತ್ಸೆಗಿಂತಲೂ ರೋಗಿಗಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವೈದ್ಯಕೀಯ ಸೇವೆಗಳ ಜೊತೆಗೆ ರೋಗಿಗಳ ಕುಟುಂಬದವರಿಗೆ ಕೌನ್ಸೆಲಿಂಗ್ ಮತ್ತು ಅಗತ್ಯವಿರುವ ಮಾನಸಿಕ ಬೆಂಬಲವನ್ನು ಇಲ್ಲಿ ಒದಗಿಸಲಾಗುತ್ತದೆ ಎಂದು ವಿವರಿಸಿದರು.

ಅ. 10ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’

ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಎಂಎಚ್‌ಆರ್‌ಸಿ ವತಿಯಿಂದ ಅ. 10ರಂದು ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬ ಘೋಷವಾಕ್ಯದೊಂದಿಗೆ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಎಂಬ ಜಾಗೃತಿ ಜಾಥಾವನ್ನು ಆಯೋಜಿಸಲಾಗಿದೆ.

ವಿವಿಧ ಕ್ಲಬ್‌ಗಳ ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಅಂದು ಬೆಳಿಗ್ಗೆ 5.15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ವೃತ್ತದಿಂದ ಸೈಕಲ್‌ನಲ್ಲಿ ಪ್ರಯಾಣ ಆರಂಭಿಸಿ ಸುಮಾರು 68 ಕಿ.ಮೀ. ದೂರವನ್ನು ಕ್ರಮಿಸಿ ಮಣಿಪಾಲದ ಎಂಎಚ್‌ಆರ್‌ಸಿ ಕೇಂದ್ರವನ್ನು ತಲುಪಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂಎಚ್‌ಆರ್‌ಸಿ ನಿರ್ದೇಶಕಿ ಜೇಕಬ್, ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್, ಮಾಹೆ ಸಹ ಕುಲಪತಿ ಮೇಜರ್ ಜನರಲ್ (ನಿವೃತ್ತ) ಡಾ. ಮ್ಯಾಥ್ಯೂಸ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿ ಸಂಶೋಧನಾ ನಿರ್ದೇಶಕ ಹಾಗೂ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಹಾಜರಿದ್ದರು.

ಹಂಚಿಕೊಳ್ಳಿ: