ಮೂಡುಬಿದಿರೆ | ಕಂಬಳ ಓಟಗಾರರ 10 ದಿನಗಳ ತರಬೇತಿ ಶಿಬಿರ ಸಂಪನ್ನ!
ಮೂಡುಬಿದಿರೆ: ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡಮಿ ವತಿಯಿಂದ ಕಡಲಕೆರೆಯಲ್ಲಿ ನಡೆದ 7ನೇ ವರ್ಷದ 10 ದಿನಗಳ ಕಂಬಳದ ಓಟಗಾರರ ತರಬೇತಿ ಶಿಬಿರದಲ್ಲಿ 42 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಅಕಾಡೆಮ...

ಮೂಡುಬಿದಿರೆ: ಕಡಲಕೆರೆಯಲ್ಲಿ ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡಮಿ ವತಿಯಿಂದ ಆಯೋಜಿಸಲಾಗಿರುವ 10 ದಿನಗಳ 7ನೇ ವರ್ಷದ ಕಂಬಳದ ಓಟಗಾರರ ತರಬೇತಿ ಶಿಬಿರದಲ್ಲಿ ಒಟ್ಟು 42 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಭಜಿತ ದ.ಕ. ಜಿಲ್ಲೆಯಿಂದ ತರಬೇತಿಗಾಗಿ ಒಟ್ಟು 123 ಮಂದಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಮೊದಲ ಹಂತದಲ್ಲಿ 72 ಮಂದಿಯನ್ನು ಹಾಗೂ ಅಂತಿಮವಾಗಿ 42 ಮಂದಿಯನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ತರಬೇತಿ ಪಡೆಯುತ್ತಿರುವವರಲ್ಲಿ ಜೆಸಿಬಿ ಆಪರೇಟರ್‌ಗಳು, ಪೈಂಟಿಂಗ್ ವೃತ್ತಿಯವರು, ಚಾಲಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ, ಜೊತೆಗೆ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವೀಧರರೂ ಸಹ ಇದರಲ್ಲಿ ಸೇರಿದ್ದಾರೆ ಎಂದು ಅವರು ವಿವರಿಸಿದರು.
ಅಕ್ಟೋಬರ್ 8 ರಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ತರಬೇತಿ ಶಿಬಿರದ ಅಂಗವಾಗಿ ನೇಗಿಲು ಕಿರಿಯ ಮತ್ತು ಸಬ್ ಜ್ಯೂನಿಯರ್ ವಿಭಾಗದಲ್ಲಿ ಕೋಟಿ ಚೆನ್ನಯ ಜೋಡುಕೆರೆ ಪ್ರಾಯೋಗಿಕ ಕಂಬಳ ನಡೆಯಲಿದೆ. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಕಂಬಳ ಅಕಾಡೆಮಿಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಕಂಬಳ ಸಮಿತಿ ಪ್ರಮುಖರಾದ ಈದು ಜ್ವಾಲಾಪ್ರಸಾದ್ ಹಾಜರಿದ್ದರು.




