ಸೌಹಾರ್ದತೆಯ ಉಡುಪಿಯಲ್ಲಿ ಅಸಹಿಷ್ಣುತೆ- ಮಠದಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ ಸಮಾಜ ತಲೆತಗ್ಗಿಸುವ ವಿಚಾರ: ದೇವಿಪ್ರಸಾದ್ ಶೆಟ್ಟಿ ಬೆಳಪು
ಕಾಪು; ಭೇದ-ಭಾವವಿಲ್ಲದೆ ಜಗತ್ತನ್ನೇ ಕಾಯುವ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ, ಕೇವಲ ಧರ್ಮದ ಕಾರಣಕ್ಕಾಗಿ ಮುಸ್ಲಿಂ ಯುವತಿಯೊಬ್ಬಳಿಗೆ ವಸತಿ ನಿರಾಕರಿಸಿರುವ ಘಟನೆ... The post ಸೌಹಾರ್ದತೆಯ ನೆಲೆಬೀಡು ಉಡುಪಿಯಲ್ಲಿ ಅ...

ಕಾಪು; ಯಾವುದೇ ಭೇದವಿಲ್ಲದೆ ಇಡೀ ಜಗತ್ತನ್ನು ರಕ್ಷಿಸುವ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ, ಧರ್ಮದ ಆಧಾರದ ಮೇಲೆ ಮುಸ್ಲಿಂ ಯುವತಿಯೊಬ್ಬಳಿಗೆ ವಸತಿ ನೀಡಲು ನಿರಾಕರಿಸಲಾಗಿರುವುದು ನಾಗರಿಕ ಸಮಾಜವೇ ನಾಚಿಕೆಪಡುವಂತಹ ವಿಷಯ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಕುಟುಂಬವೊಂದರ ಜೊತೆ ಉಡುಪಿಗೆ ಬಂದಿದ್ದ ಮುಸ್ಲಿಂ ಯುವತಿಯು, ಯಾವುದೇ ತೊಂದರೆಯಿಲ್ಲದೆ ಶ್ರೀಕೃಷ್ಣನ ದರ್ಶನ ಪಡೆದಿದ್ದಾಳೆ. ಆದರೆ, ರಾತ್ರಿ ಉಳಿದುಕೊಳ್ಳಲು ಮಠದ ವಸತಿಗೃಹದಲ್ಲಿ ಅನುಮತಿ ಕೋರಿದಾಗ ಆಕೆಗೆ ಅವಕಾಶ ನಿರಾಕರಿಸಲಾಗಿದೆ. ಇದು ಕೋಮು ಸಾಮರಸ್ಯಕ್ಕೆ ಪ್ರಸಿದ್ಧವಾದ ಉಡುಪಿ ಜಿಲ್ಲೆಯ ಗೌರವಕ್ಕೆ ಕಳಂಕ ತಂದಿದ್ದು, ಈ ವಿಷಯದಲ್ಲಿ ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮರೆಯಾಯಿತೇ ಪೇಜಾವರ ಶ್ರೀಗಳ ಪರಂಪರೆ?
“ವಸುಧೈವ ಕುಟುಂಬಕಂ” ಮತ್ತು “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಉನ್ನತ ಆಶಯಗಳೇ ಹಿಂದೂ ಧರ್ಮದ ಮೂಲಾಧಾರ. ಇದೇ ಕೃಷ್ಣಮಠದಲ್ಲಿ ಹಿರಿಯ ಪೇಜಾವರ ಶ್ರೀಗಳು ಇಫ್ತಾರ್ ಕೂಟವನ್ನು ನಡೆಸುವ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ದೊಡ್ಡ ಸಂದೇಶವನ್ನು ನೀಡಿದ್ದರು. ತಮ್ಮ ವಾಹನಕ್ಕೆ ಮುಸ್ಲಿಂ ಚಾಲಕರನ್ನು ನೇಮಿಸಿಕೊಂಡಿದ್ದ ಅವರು ಸರ್ವಧರ್ಮ ಸಮನ್ವಯದ ನಿಜವಾದ ಪ್ರತಿಪಾದಕರಾಗಿದ್ದರು. ಆದರೆ ಸಮಾಜಕ್ಕೆ ದಾರಿ ತೋರಿಸಬೇಕಾದ ಅಷ್ಟಮಠಗಳಲ್ಲೇ ಇಂತಹ ತಾರತಮ್ಯ ಉಂಟಾಗಿರುವುದು ಬಹಳ ದುಃಖಕರ ಎಂದು ಅವರು ಹೇಳಿದ್ದಾರೆ.
ಹಾಜಿ ಅಬ್ದುಲ್ಲಾರ ಕೊಡುಗೆ ಮರೆತರೇ?
ಕೃಷ್ಣಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಇರುವ ಬಾಂಧವ್ಯ ಇಂದಿನದಲ್ಲ. ಅಂದು ಮಠದಲ್ಲಿ ದೀಪ ಬೆಳಗಲು ಎಣ್ಣೆಯಿಲ್ಲದ ಸಂಕಷ್ಟದ ಪರಿಸ್ಥಿತಿಯಿದ್ದಾಗ, ದಾನಿ ಹಾಜಿ ಅಬ್ದುಲ್ಲಾ ಅವರು ಮಠಕ್ಕೆ ದೊಡ್ಡ ಮಟ್ಟದ ನೆರವು ನೀಡಿದ್ದರು. ಇಂದಿಗೂ ಮಠದ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮುಸ್ಲಿಂ ಕುಟುಂಬವೊಂದು ಭಕ್ತಿಯಿಂದ ಮಾಡುತ್ತಿರುವುದು ಇಲ್ಲಿನ ಸೌಹಾರ್ದಯುತ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಇಂತಹ ಭವ್ಯ ಪರಂಪರೆ ಹೊಂದಿರುವ ಕೃಷ್ಣಮಠದಲ್ಲಿ ಸಂಭವಿಸಿರುವ ಈ ಘಟನೆ, ಕೇವಲ ಆ ಯುವತಿಗೆ ಆದ ಅವಮಾನವಲ್ಲ; ಬದಲಿಗೆ ಭಕ್ತರ ಸಂಕಷ್ಟ ಪರಿಹರಿಸುವ ದೇವರಿಗೂ ಹಾಗೂ ಇಡೀ ಸಮಾಜಕ್ಕೂ ಆದ ಅಪಚಾರವಾಗಿದೆ. ಇದು ಅತ್ಯಂತ ಖಂಡನೀಯ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.




