ಸಿಎಂ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ವಿಜಯೇಂದ್ರ ಆಕ್ರೋಶ!
– ಫಾರಂ ನೆಪ ಮಾಡಿಕೊಂಡು ಚುನಾವಣಾ ಆಯೋಗದ ಮೇಲೆ ಪ್ರತಿಭಟನೆ ತುಮಕೂರು: ಸಿಎಂ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B...

ಫಾರಂ ನೆಪ ಮಾಡಿಕೊಂಡು ಚುನಾವಣಾ ಆಯೋಗದ ಮೇಲೆ ಪ್ರತಿಭಟನೆ
ತುಮಕೂರು: ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು (Tumakuru) ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈಸ್ ಪ್ರಾಜೆಕ್ಟ್ ಅನ್ನು ವಶಕ್ಕೆ ಪಡೆಯುತ್ತಿದ್ದಾರೆ. ಜೊತೆಗೆ ಸಾರ್ವಜನಿಕರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್ ನಿರ್ಮಿಸಲು ಮುಂದಾಗಿದ್ದಾರೆ. ಫಾರಂ ನಂ-7 ಎಂಬುದು ಚುನಾವಣಾ ಆಯೋಗವು ನೀಡಿರುವ ಹಕ್ಕಾಗಿದೆ. ಈ ಫಾರಂ ಬಳಸಿಕೊಂಡು ಅನುಮಾನಾಸ್ಪದ ಮತದಾರರ ವಿರುದ್ಧ ದೂರು ದಾಖಲಿಸಬಹುದಾಗಿದೆ. ಇಂತಹ ಫಾರಂ ಅನ್ನು ನೆಪವಾಗಿಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ನಾವು ಸಲ್ಲಿಸಿದ ಅರ್ಜಿ ಸರಿಯಿಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸುತ್ತಾರೆ, ಆದರೆ ಅದನ್ನು ದೊಡ್ಡ ಕ್ರಿಮಿನಲ್ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕಾರದ ಮದ ತಲೆಗೆ ಏರಿದೆ. ಮದ ಏರಿದರೆ ಏನಾಗುತ್ತದೆ ಎಂಬುದನ್ನು ಡಿಕೆಶಿ ಅವರ ವರ್ತನೆಯಿಂದ ಕಲಿಯಬೇಕು. ವೀರಶೈವ ಲಿಂಗಾಯತ ಸ್ವಾಮಿಜಿಗಳ ಸಭೆಯಲ್ಲಿ ಅವರನ್ನು ಅವಮಾನಿಸಿದ್ದಾರೆ. ಮೂರು ಸಾವಿರನೋ ಆರು ಸಾವಿರನೋ ಮಠ ಎಂದು ಲಘುವಾಗಿ ಮಾತನಾಡಿದ್ದಾರೆ. ಅವರ ಮದವನ್ನು ಇಳಿಸಲು ಜನ ಈಗಾಗಲೇ ನಿರ್ಧರಿಸಿದ್ದಾರೆ ಎಂದು ಅವರು ಹರಿಹಾಯ್ದರು.
ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯಲ್ಲೇ ನೈಸ್ ವಿಚಾರದಲ್ಲಿ ಕೈ ಹಾಕಿದ್ದಾರೆ. ನೈಸ್ ಪ್ರಾಜೆಕ್ಟ್ ಅನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಬಿಡಿದಿಯಲ್ಲಿ ರೈತರನ್ನು ಬೀದಿಪಾಲು ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದಾಗಿನಿಂದ ರಾಜ್ಯದಲ್ಲಿ ಚುನಾಯಿತ ಸರ್ಕಾರವಿದೆಯೇ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದ ಅನುದಾನಕ್ಕಾಗಿ ಕಾಯುತ್ತಿದ್ದಾರೆ. ಒಂದು ಹೆಕ್ಟೇರ್‌ಗೆ 2,5000 ರೂ. ಪರಿಹಾರವನ್ನು ಘೋಷಿಸಿದ್ದಾರೆ. ಲಜ್ಜೆಗೇಡಿ ಎಂಬಂತೆ ಅಷ್ಟೊಂದು ಕಡಿಮೆ ಮೊತ್ತವನ್ನು ಘೋಷಿಸಿದ್ದಾರೆ. ನಾವು ಎಕರೆಗೆ 50 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದ್ದೇವೆ. ಸಿಎಂ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮಾತ್ರ ಲಾಯಕ್ ಎಂದು ಜನ ಮಾತನಾಡುತ್ತಿದ್ದಾರೆ. ಅವರ ಸ್ವಪಕ್ಷದ ಶಾಸಕರೇ ಬರ ಪರಿಹಾರಕ್ಕಾಗಿ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಖಜಾನೆ ಖಾಲಿ ಮಾಡಿದ್ದಾರೆ, ಸಂಬಳ ನೀಡಲು ಹಣವಿಲ್ಲ. ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹಣಕಾಸಿನ ಪರಿಸ್ಥಿತಿಯ ಕುರಿತು ಸಿಎಂ ಶ್ವೇತಪತ್ರ ಹೊರಡಿಸಲಿ. ಪೊಲೀಸರಿಗೆ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿಗೆ ವೇತನ ಪಾವತಿಸಲೂ ಹಣವಿಲ್ಲ. ಇಂತಹ ಬಡವರ ಮತ್ತು ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ನಾವು ಹಾಗೂ ಜನ ಸಂಕಲ್ಪ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಕಿಡಿಕಾರಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಬಯಕೆಯೂ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸಾಗಬೇಕೆಂಬುದೇ ಆಗಿದೆ. ಈ ವಿಷಯವಾಗಿ ನಾನು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮೈತ್ರಿ ಮುಂದುವರಿಯಬೇಕೆಂದರೆ ಈಗಲೇ ಕುಳಿತು ಚರ್ಚಿಸಬೇಕು. ಯಾವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ, ಯಾವ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಬೇಕು ಎಂಬುದು ಈಗಲೇ ನಿರ್ಧಾರವಾದರೆ ನಮ್ಮ ಕಾರ್ಯಕರ್ತರಿಗೆ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ಇದಕ್ಕೆ ಕುಮಾರಸ್ವಾಮಿ ಅವರು ಉತ್ತಮ ಸಲಹೆ ಎಂದು ಭರವಸೆ ನೀಡಿದ್ದಾರೆ ಎಂದರು.




