ನಿಮ್ಮ ಕ್ಷೇತ್ರದಲ್ಲೇ ರಸ್ತೆಯಲ್ಲಿ 5,964 ಗುಂಡಿಗಳು ಬಾಯ್ದೆರೆದಿವೆ, ‘ರೀಲ್ಸ್ ಸಚಿವರೇ, ಇದೇನಾ ನಿಮ್ಮ ಮಾದರಿ ರಾಜಧಾನಿ..?
ಬೆಂಗಳೂರು: ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು AI ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. “ರೀಲ್ಸ್ ಸಚಿವರಾದ ಕೃಷ್ಣ ಬೈರೇಗೌಡ ಅವರೇ, ಇದೇನಾ...

ಬೆಂಗಳೂರು: ನಿಮ್ಮ ಸ್ವಕ್ಷೇತ್ರವಾದ ಬ್ಯಾಟರಾಯನಪುರ ವ್ಯಾಪ್ತಿಯ 824 ಕಿ.ಮೀ ಉದ್ದದ ರಸ್ತೆಗಳಲ್ಲಿ AI ತಂತ್ರಜ್ಞಾನದ ಮೂಲಕ ನಡೆಸಲಾದ ಸಮೀಕ್ಷೆಯಲ್ಲಿ ಒಟ್ಟು 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. “ರೀಲ್ಸ್ ಸಚಿವರಾದ ಕೃಷ್ಣ ಬೈರೇಗೌಡ ಅವರೇ, ಇದೇನಾ ನಿಮ್ಮ ಮಾದರಿ ರಾಜಧಾನಿ?” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಬೆಂಗಳೂರಿನ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ 5,964 ರಸ್ತೆ ಗುಂಡಿಗಳು ಕಂಡುಬಂದಿವೆ. ಇದು ನಗರದ ಕೇವಲ ಒಂದು ಭಾಗದ ವರದಿಯಾಗಿದ್ದು, ಇದೇ ಸಮೀಕ್ಷೆಯ ಮೂಲಕ ಬೆಂಗಳೂರಿನ ಇತರೆಡೆಗಳಲ್ಲಿಯೂ ಸಾವಿರಾರು ಗುಂಡಿಗಳಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಒಂದು ಕಡೆ ‘ವಿಶ್ವಮಟ್ಟದ ಬೆಂಗಳೂರು’ ಎಂದು ಬಿಂಬಿಸಲಾಗುತ್ತಿದೆ. ಆದರೆ ಮತ್ತೊಂದು ಕಡೆ ರಾಜಧಾನಿಯ ರಸ್ತೆಗಳು ಹದಗೆಟ್ಟಿದ್ದು, ಎಲ್ಲೆಡೆ ಗುಂಡಿಗಳೇ ರಾರಾಜಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ವಾಹನ ನಿಲುಗಡೆ ಶುಲ್ಕ ವಸೂಲಾತಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ಸರ್ಕಾರ, ಒತ್ತುವರಿ ತೆರವುಗೊಳಿಸಿರುವುದಾಗಿ ಪ್ರಚಾರ ಪಡೆಯುತ್ತದೆ. ಆದರೆ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸುವ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡುವ ವಿಷಯದಲ್ಲಿ ಈ ಮಟ್ಟದ ನಿರ್ಲಕ್ಷ್ಯ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಗುಂಡಿಗಳ ನಡುವೆಯೇ ಸಂಚರಿಸುವ ದುಸ್ಥಿತಿ ಇದೆ. ಮಳೆಗಾಲದಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
“ಕೃಷ್ಣ ಬೈರೇಗೌಡ ಅವರೇ, ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಹಾಗಾದರೆ ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ದುರಸ್ತಿಯ ಹೊಣೆಗಾರಿಕೆ ಯಾರದ್ದು?” ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಧಾನಿಯ ನಾಗರಿಕರಿಗೆ ಭಾಷಣ, ಪ್ರಚಾರ ಅಥವಾ ಹೊಸ ಶುಲ್ಕಗಳ ಅಗತ್ಯವಿಲ್ಲ. ಅವರಿಗೆ ಬೇಕಿರುವುದು ಗುಂಡಿ ಮುಕ್ತ ರಸ್ತೆಗಳು, ಸುರಕ್ಷಿತ ಸಂಚಾರ ಹಾಗೂ ಸೂಕ್ತ ನಗರ ನಿರ್ವಹಣೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ‘ಬ್ರಾಂಡ್ ಬೆಂಗಳೂರು’ ಅಂದ್ರೆ ಏನು ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ನೀಡಿ ಎಂದು ಅವರು ಆಗ್ರಹಿಸಿದ್ದಾರೆ.




