ರಾಜಕೀಯದಲ್ಲಿ ಗೆಲ್ಲುವ ತಾಕತ್ತಿಲ್ಲ, ರಿಯಲ್ ಎಸ್ಟೇಟ್ ಮಾಡು ಉದ್ದಾರವಾದ್ರೂ ಆಗ್ತೀಯ: ರಕ್ಷಾ ರಾಮಯ್ಯಗೆ ಪ್ರದೀಪ್ ಈಶ್ವರ್ ಟಾಂಗ್!
ಬೆಂಗಳೂರು: ಚಿಕ್ಕಬಳ್ಳಾಪುರ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಜೋರಾಗಿದೆ. ಶಾಸಕ ಪ್ರದೀಪ್ ಈಶ್ವರ್ ಅವರು ಕಳೆದ ಬಾರಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಗೆ...

ಬೆಂಗಳೂರು: ಚಿಕ್ಕಬಳ್ಳಾಪುರ ವ್ಯಾಪ್ತಿಯ ಕಾಂಗ್ರೆಸ್ ನಾಯಕರ ನಡುವೆ ಆಂತರಿಕ ಕಲಹ ತೀವ್ರಗೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಾ ರಾಮಯ್ಯ ಅವರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೆಲ್ಲುವ ತಾಕತ್ತಿಲ್ಲ, ರಾಜಕೀಯವಾಗಿ ಏನನ್ನೂ ಸಾಧಿಸಲಾಗದು. ರಿಯಲ್ ಎಸ್ಟೇಟ್ ಮಾಡಿಕೊಂಡರೆ ಜೀವನದಲ್ಲಿ ಉದ್ಧಾರವಾದರೂ ಆಗುತ್ತೀಯ ಎಂದು ಅವರು ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಪ್ರದೀಪ್ ಈಶ್ವರ್, ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಕ್ಕರೂ ಗೆಲ್ಲುವ ಯೋಗ್ಯತೆ ಇಲ್ಲದ ವ್ಯಕ್ತಿ, ಪದೇ ಪದೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ಮೂಗು ತೂರಿಸುತ್ತಾ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಅವಕಾಶ ಸಿಕ್ಕಾಗ ತಮ್ಮ ಸಾಮರ್ಥ್ಯ ತೋರಿಸಲು ವಿಫಲರಾಗಿ, ಈಗ ಅನಗತ್ಯವಾಗಿ ಸ್ಥಳೀಯರನ್ನು ಪಕ್ಷದ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಬಿಜೆಪಿಯವರೊಂದಿಗೆ ಶಾಮೀಲಾಗಿ ಪೇರೆಸಂದ್ರದಲ್ಲಿ ನಡೆದ ಕರಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಬಿಜೆಪಿಯವರ ಜೊತೆ ನಿರಂತರ ಸಂಪರ್ಕ ಹೊಂದಿರುವ ಅಂತಹ ಪಕ್ಷ ವಿರೋಧಿಯನ್ನು ಏನೆಂದು ಕರೆಯಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ನಾನು ಹೇಳಬಯಸುವುದೇನೆಂದರೆ, ನಿನ್ನ ಜೀವನದಲ್ಲಿ ನೀನು ರಾಜಕೀಯವಾಗಿ ಏನೂ ಮಾಡಲಾರೆ. ಸಾಧ್ಯವಾದರೆ real estate ಆದ್ರೂ ಮಾಡಿಕೊಂಡಿರು, ಉದ್ಧಾರವಾದರೂ ಆಗ್ತೀಯ. ಇಂತಿ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಪ್ರದೀಪ್ ಈಶ್ವರ್. ನಿನಗೆ ಎಂ.ಪಿ ಟಿಕೆಟ್ ತಪ್ಪಿಸುತ್ತೇನೆ, ಮುಂದಿನ ಬಾರಿ ನನ್ನ ತಮ್ಮನಿಗೆ ಎಂಪಿ ಟಿಕೆಟ್ ಕೊಡಿಸ್ತೀನಿ ನೋಡ್ತೀಯಾ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.




